ಶಿಲೆ ,
	ಒಂದು ಇಲ್ಲವೆ ಹೆಚ್ಚಿನ ಖನಿಜ ಪ್ರಭೇದಗಳನ್ನೂ ರಾಸಾಯನಿಕ ಮತ್ತು ಖನಿಜೀಯ ಸ್ಥಿರತೆಯ ಕೆಲವೊಂದು ಮಟ್ಟವನ್ನೂ ಹೊಂದಿರುವ ಖನಿಜಕಣಗಳ ಸಂಘಟಿತ ಅಥವಾ ಅಸಂಘಟಿತ ಸಮಷ್ಟಿ ಅಥವಾ ಸಮುದಾಯ (ರಾಕ್). ಇದು ಭೂಮಿಯಲ್ಲಿ ಲಭ್ಯವಾಗುವ, ಕೆಲಮಟ್ಟಿಗೆ ಸಂಲಗ್ನಗುಣವಿಶೇಷದಿಂದ ಕೂಡಿರುವ, ಅಡಕಗೊಂಡ ಸ್ಥಿತಿಯಲ್ಲಿರುವ ಗಡಸುವಸ್ತು.
ಪ್ರಸ್ತುತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳಡಿಯಲ್ಲಿ ವಿಸ್ತರಿಸಿದೆ: 

1. ಸಂಯೋಜನೆ
2. ಶಿಲಾವಿಧಗಳು
3. ಶಿಲಾಸಾರ
4. ಶಿಲಾರಚನೆ
5. ಶಿಲಾವಿನ್ಯಾಸ
6. ಶಿಲಾಕ್ಷಯ
7. ಶಿಲಾಕಾಂಡಗಳು

	ಸಂಯೋಜನೆ: ಖನಿಜಗಳು ಧಾತುವಿನ ರಾಸಾಯನಿಕ ಸಂಯೋಜನೆ ಯಿಂದ ಆಗಿವೆ. ಪ್ರಕೃತಿಯಲ್ಲಿ ಸು. 10 ವಿವಿಧ ಧಾತುಗಳಿದ್ದರೂ ಭೂಮಿಯ ಹೊರಪದರದಲ್ಲಿ ಕಾಣಬರುವ ಶಿಲೆಗಳ ಪೈಕಿ ಸೇ 75ರಷ್ಟನ್ನು ಕೇವಲ 9 ಧಾತುಗಳು ರಚಿಸಿವೆ. ಇವುಗಳ ಸೇಕಡಾವಾರು ಹಂಚಿಕೆ ಹೀಗಿದೆ: ಆಕ್ಸಿಜನ್ 46.71; ಸಿಲಿಕಾನ್ 27.69; ಅಲ್ಯೂಮಿನಿಯಮ್ 8.07; ಕಬ್ಬಿಣ 5.05; ಕ್ಯಾಲ್ಸಿಯಮ್ 3.65; ಸೋಡಿಯಮ್ 2.58; ಮೆಗ್ನೀಸಿಯಮ್ 2.08; ಟೈಟಾನಿಯಮ್ 0.62; ಹೈಡ್ರೊಜನ್ 0.14; ಇತರೆ 3.14.

	ಈ ಧಾತುಗಳ ಪೈಕಿ ಶಿಲೆಗಳಲ್ಲಿ ಆಕ್ಸಿಜನ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಈ ಧಾತು ಇತರ ಧಾತುಗಳೊಡನೆ ರಾಸಾಯನಿಕವಾಗಿ ಸಂಯೋಗಗೊಂಡು ಆಕ್ಸೈಡ್ ರೂಪದಲ್ಲಿಯ ಖನಿಜಗಳನ್ನು ಉಂಟು ಮಾಡುತ್ತದೆ. ಎರಡನೆಯ ಮಣೆ ಸಿಲಿಕಾನಿಗೆ. ಈ ಕಾರಣದಿಂದ ಸಿಲಿಕಾನ್ ಡೈಆಕ್ಸೈಡ್ ಎಂಬ ರೂಪದ ಅಂದರೆ ಕ್ವಾಟ್ರ್ಸ್ ಶಿಲೆ ಅನೇಕ ಶಿಲೆಗಳಲ್ಲಿ ಬಲು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಅಲ್ಲದೆ ಸಿಲಿಕಾನ್‍ಡೈಆಕ್ಸೈಡ್ (ಸಿಲಿಕ) ಇತರ ಹಲವಾರು ಆಕ್ಸೈಡುಗಳೊಡನೆ ಸಂಯೋಗಗೊಂಡು ಸಿಲಿಕೇಟ್ ಖನಿಜಗಳನ್ನು ಉಂಟುಮಾಡುತ್ತದೆ.
ಶಿಲಾ ವಿಧಗಳು: ಭೂಮಿಯ ಹೊರಮೈಯಲ್ಲಿ ಮೂರುವರ್ಗದ ಶಿಲೆಗಳು ಕಾಣಬರುತ್ತವೆ.

1. ಅಗ್ನಿಶಿಲೆಗಳು: ಶಿಲಾರಸ (ಮ್ಯಾಗ್ಮ) ಘನೀಭೂತವಾಗುವುದರಿಂದ ಇವು ಮೈದಳೆಯುತ್ತವೆ.
2. ಅವಸಾದನ ಶಿಲೆಗಳು: ಶಿಥಿಲೀಕರಣದಿಂದ ಉಂಟಾದ ಚೂರುಗಳು ಸಮುದ್ರ ತಳದಲ್ಲಿ ಸಂಗ್ರಹವಾದಾಗ ಇವು ಉಂಟಾಗುತ್ತವೆ.
3. ರೂಪಾಂತರಶಿಲೆಗಳು: ಅಗ್ನಿ ಮತ್ತು ಅವಸಾದನಶಿಲೆಗಳು ಅಧಿಕ, ಒತ್ತಡಗಳಿಗೆ ಒಳಗಾದಾಗ ಉಂಟಾಗುವಂಥವು.

ಇವಲ್ಲದೆ ಸಂಕರಶಿಲೆಗಳೂ (ಹೈಬ್ರಿಡ್) ಉಂಟು. ಮೆಟಸೊಮ್ಯಾಟಿಕ್ ಮತ್ತು ಮಿಗ್‍ಮ್ಯಾಟಿಟಿಕ್ ಶಿಲೆಗಳು ಈ ವರ್ಗಕ್ಕೆ ಸೇರುತ್ತವೆ.

	ಮುಖ್ಯವಾಗಿ ಅಗ್ನಿಶಿಲೆ ಮತ್ತು ರೂಪಾಂತರಶಿಲೆಗಳ ಉಗಮ, ಲಭ್ಯತೆ, ರಚನೆ ಮತ್ತು ಇವುಗಳ ಇತಿಹಾಸ ಮೊದಲಾದವುಗಳನ್ನು ಕುರಿತ ಭೂವೈಜ್ಞಾನಿಕ ಅಧ್ಯಯನ ಶಿಲಾವಿಜ್ಞಾನ.	

	ಶಿಲಾಪಾಕ: ಅರ್ಧದ್ರವ, ಅರ್ಧಘನರೂಪದ, ಸ್ವಾಭಾವಿಕವಾಗಿ ಹರಿಯಬಲ್ಲ, ಗಂಜಿಯಂತಿರುವ ಶಿಲಾವಸ್ತು (ಮ್ಯಾಗ್ಮ). ಮಾತೃಶಿಲಾದ್ರವ ಎಂದೂ ಕರೆಯುವುದಿದೆ. ಗ್ರೀಕ್ ಭಾಷೆಯಲ್ಲಿ ಮ್ಯಾಗ್ಮ ಎಂದರೆ ದಪ್ಪ ಗಂಜಿಯ ರೂಪದ ವಸ್ತುವೆಂದೇ ಅರ್ಥ. ಅಗ್ನಿಶಿಲೆಗಳು ಇದರಿಂದ ರೂಪುಗೊಳ್ಳುತ್ತವೆ. ವಸ್ತುತಃ ಇದಕ್ಕೂ ಗಂಜಿಗೂ ಯಾವ ವಿಧವಾದ ಸಂಬಂಧವೂ ಇಲ್ಲ. ಮೂಲ ಶಿಲಾಪಾಕ ಸಾಮಾನ್ಯವಾಗಿ ದೃಷ್ಟಿಗೋಚರ ವಸ್ತುವಲ್ಲ. ಇದು ಭೂಮಿಯ ಹೊರಚಿಪ್ಪಿನ ಪದರಗಳಲ್ಲಿ ಇಲ್ಲವೆ ಅವುಗಳ ತಳದಲ್ಲಿ ಮಾತ್ರ ಇರುವುದು. ಆದ್ದರಿಂದಲೇ ಶಿಲಾಶಾಸ್ತ್ರಜ್ಞರು ಶಿಲಾಪಾಕದ ವಿವರಣೆಯಲ್ಲಿ ಒಮ್ಮತ ಅಭಿಪ್ರಾಯ ತಾಳಿಲ್ಲ. ಇದರ ಸಂಯೋಜನೆ, ರಾಸಾಯನಿಕ ಮತ್ತು ಭೌತಗುಣಗಳ ವಿಷಯದಲ್ಲೂ ಖಚಿತ ಅಭಿಪ್ರಾಯ ಇಲ್ಲ.

	ಶಿಲಾಪಾಕ ಭೂಮಿಯ ಒಳಗೆ ಉದ್ಭವವಾಗಿ ಹೊರಹೊಮ್ಮುವ ಇಲ್ಲವೆ ಶಿಲಾ ಪದರಗಳ ಮಧ್ಯೆ ನುಗ್ಗಬಲ್ಲ ಸಾಮಥ್ರ್ಯ ಹೊಂದಿದೆ. ಅತಿಯಾದ ಉಷ್ಣತೆಯಿಂದ ಒಡಗೂಡಿರುವುದರಿಂದ ಇದು ಮುಖ್ಯವಾಗಿ ದ್ರವರೂಪದ ಸಿಲಿಕೇಟುಗಳಿಂದ ಕೂಡಿದ್ದರೂ ಇದರಲ್ಲಿ ಘನರೂಪದ ಖನಿಜಹರಳುಗಳಾದ ಆಲಿವೀನ್, ಪೈರಾಕ್ಸೀನ್, ಪ್ಲೇಜಿಯೊಕ್ಲೇಸ್ ಮುಂತಾದವೂ ಇರುತ್ತವೆ. ಕೆಲವು ವೇಳೆ ಅನಿಲರೂಪದ ವಸ್ತುಗಳೂ ಇರುವುದುಂಟು.

	ಪ್ರಪಂಚದಲ್ಲಿಯ ಹೆಚ್ಚಿನ ಧಾತುಗಳು ಶಿಲಾಪಾಕದಲ್ಲಿ ಅಡಗಿವೆ ಯಾದರೂ ಕೇವಲ ಒಂಬತ್ತು ಧಾತುಗಳು ಮಾತ್ರ ಸೇ. 99ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿವೆ. ಇವುಗಳ ಸೇಕಡಾತಿ ಹೀಗಿದೆ: ಆಕ್ಸಿಜನ್ 46.71, ಸಿಲಿಕಾನ್ 27.69, ಅಲ್ಯೂಮಿನಿಯಮ್ 8.07, ಕಬ್ಬಿಣ 5.05, ಮೆಗ್ನೀಸಿಯಮ್ 2.08, ಕ್ಯಾಲ್ಸಿಯಮ್ 3.65, ಸೋಡಿಯಮ್ 2.75, ಪೊಟ್ಯಾಸಿಯಮ್ 2.58, ಟೈಟಾನಿಯಮ್ 0.62, ಇತರೆ 0.8. ಶಿಲಾಪಾಕ ಸಂಯೋಜನೆಯಲ್ಲಿ ಈ ಧಾತುಗಳಿಂದ ಕೂಡಿದ ದ್ರಾವಣವಾಗಿದೆಯೆ ವಿನಾ ಮಿಶ್ರಣವಲ್ಲ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ.

	ಶಿಲಾಪಾಕ ಹೊರಗೆಹೊಮ್ಮಿದಾಗ ಅಗ್ನಿಪರ್ವತಗಳು ಮೈದಳೆ ಯುತ್ತವೆ. ಶಿಲಾಪಾಕ ಹೊರಹೊಮ್ಮಿ ಭೂಮಿಯ ಮೇಲೆ ಹರಿದಾಗ ಅದನ್ನು ಶಿಲಾರಸ ಅಥವಾ ಲಾವ ಎಂದು ಕರೆಯುತ್ತಾರೆ. ಶಿಲಾರಸ ಆರಿದಾಗ ಅಗ್ನಿಪರ್ವತದ ಶಿಲೆಗಳಾಗುವುವು. ಉದಾಹರಣೆಗೆ ದಖನ್ ಬೆಸಾಲ್ಟ್. ಶಿಲಾಪಾಕ ಹೊರಹೊಮ್ಮದೆ ಭೂಮಿಯ ಹೊರ ಚಿಪ್ಪಿನ ಪದರಗಳಲ್ಲಿ ನುಗ್ಗಿ ನಿಧಾನವಾಗಿ ಆರಿ ವಿವಿಧ ಖನಿಜಗಳ ಹರಳುಗಳಿಂದ ಕೂಡಿಕೊಂಡು ಆಗ್ನಿಶಿಲೆಗಳಾಗುವುದು. ಉದಾಹರಣೆಗೆ ಗ್ರಾನೈಟ್. ಶಿಲಾಪಾಕವನ್ನು ಅದರಲ್ಲಿಯ ವಿವಿಧ ಖನಿಜಗಳ ಸಂಯೋಜನೆಯ ಆಧಾರದ ಮೇಲೆ ಆಮ್ಲಶಿಲಾಪಾಕ ಎಂದೂ ಮಧ್ಯವರ್ತಿ ಶಿಲಾಪಾಕ ಎಂದೂ ವಿಂಗಡಿಸಲಾಗಿದೆ. ಆಮ್ಲಶಿಲಾಪಾಕ ಸ್ವಲ್ಪ ದಪ್ಪವಾಗಿದ್ದು ಸುಲಭವಾಗಿ ಹರಿಯಲಾರದು. ಇದರ ಉಷ್ಣತೆ 6000-8000ಸೆ. ಬಣ್ಣ ಸ್ವಲ್ಪ ತಿಳಿಕ್ಷಾರ ಶಿಲಾಪಾಕ ಸ್ವಲ್ಪ ತೆಳ್ಳಗಿದ್ದು ಸುಲಭವಾಗಿ ಹರಿಯಬಲ್ಲುದು. ಇದರ ಉಷ್ಣತೆ 8000-10000ಸೆ. ಬಣ್ಣ ಕಪ್ಪು.

	ಶಿಲಾಪಾಕ ಪ್ರಭೇದ: ಕೆಲವೊಂದು ನಿರ್ದಿಷ್ಟ ಶಿಲಾಪಾಕಗಳಿಂದ ಅನೇಕ ಬಗೆಯ ಅಗ್ನಿಶಿಲೆಗಳು ಉಂಟಾಗುವಿಕೆ (ಮ್ಯಾಗ್ಮಾಟಿಕ್ ಡಿಫರೆನ್ಷಿಯೇಷನ್). ಅಗ್ನಿಶಿಲೆಗಳಿಗೆ ಮೂಲವಸ್ತುವಾಗಿರುವ ಶಿಲಾಪಾಕ ಆರಿ ಗಟ್ಟಿಯಾಗುವಾಗ ಅನೇಕ ಪ್ರಭೇದದ ಅಗ್ನಿಶಿಲೆಗಳಾಗುತ್ತವೆ. ಬಗೆಬಗೆಯ ಅಗ್ನಿಶಿಲೆಗಳಿ ದ್ದರೂ ಅಷ್ಟೊಂದು ಬಗೆಯ ಶಿಲಾಪಾಕಗಳಿಲ್ಲ ಎಂಬುದು ಸ್ಥಿರಪಟ್ಟಿದೆ. ಕೇವಲ ಎರಡು ಅಥವಾ ಮೂರು ಬಗೆಯ ಶಿಲಾಪಾಕ ಪ್ರಭೇದಗಳಿದ್ದು ಇವುಗಳಿಂದ ನೂರಾರು ವಿಧದ ಅಗ್ನಿಶಿಲೆಗಳು ಏರ್ಪಡುತ್ತವೆ.

	ಅಗ್ನಿಶಿಲೆಗಳ ಮಾತೃವಸ್ತುವಾದ ಈ ಕೆಲವೇ ಬಗೆಯ ಶಿಲಾಪಾಕ ಗಳಿಗೆ ಮೂಲ ಶಿಲಾಪಾಕಗಳು ಎಂದು ಹೆಸರು. ಅಗ್ನಿಶಿಲೆಗಳು ಜನಿಸುವ ಮೊದಲು ಇವು ಉದ್ಭವಿಸುತ್ತವೆ. ಇವು ಭೂಮಿಯ ಹೊರಚಿಪ್ಪಿನ ಶಿಲೆಗಳಲ್ಲಿ ಉಷ್ಣತೆ ಅಧಿಕವಾದಾಗ ಕರಗಿ ರೂಪುಗೊಳ್ಳುತ್ತವೆ. ಮೂಲಶಿಲಾಪಾಕ ಸಂಯೋಜನೆಯಲ್ಲಿ ಸಮಗ್ರವಾಗಿರುತ್ತದೆ. ಪ್ರಭೇದಗಳಾಗಿ ವಿಂಗಡನೆಗೊಂಡಿರುವುದಿಲ್ಲ; ಶಿಲಾಗೋಳದಲ್ಲಿಯ ಶಿಲೆಗಳಿಂದ ಕಲುಷಿತವಾಗಿರುವುದಿಲ್ಲ.

	ಶಿಲಾಗೋಳದಲ್ಲಿಯ ವಿವಿಧ ಅಗ್ನಿಶಿಲೆಗಳ ಪ್ರಮಾಣ ಹೀಗಿವೆ: ಗ್ರ್ಯಾನೈಟ್ ಶಿಲೆ ಆಳದಲ್ಲಿ ಉತ್ಪನ್ನವಾದ ಹರಳುಗಳಿಂದ ಕೂಡಿದ ಇತರೆ ಎಲ್ಲ ಶಿಲೆಗಳ ಇಪ್ಪತ್ತು ಪಟ್ಟು ಹೆಚ್ಚಾಗಿರುವುದೆಂದು ಒಂದು ಅಂದಾಜು. ಹೀಗೆಯೇ ಭೂಮಿಯ ಮೇಲೆ ಲಾವರಸ ಆಗಿ ರೂಪುಗೊಂಡ ಅಗ್ನಿಪರ್ವತದ ಶಿಲೆಗಳಲ್ಲಿ ಎಲ್ಲವುಕ್ಕಿಂತಲೂ ಬೆಸಾಲ್ಟ್ ಶಿಲೆ ಐದು ಪಟ್ಟು ಹೆಚ್ಚಾಗಿದೆ. ಈ ಆಧಾರದ ಮೇಲೆ ಬುನ್‍ಸೆನ್, ಡ್ಯಾಲಿ, ರೀಡ್, ರಿಚರ್ಡ್‍ಸನ್ ಮೊದಲಾದ ಶಿಲಾಶಾಸ್ತ್ರಜ್ಞರು ಕೇವಲ ಎರಡು ವಿಧದ ಶಿಲಾಪಾಕಗಳು ಇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. (1) ಗ್ರ್ಯಾನೈಟ್ ಶಿಲಾಪಾಕ, (2) ಬೆಸಾಲ್ಟ್ ಶಿಲಾಪಾಕ. ಇವು ಮಾತ್ರ ಮೂಲಶಿಲಾಪಾಕಗಳೆಂದು ಹೇಳಿದ್ದಾರೆ. ಕೆನ್ನಡಿ ಎಂಬ ಶಿಲಾಶಾಸ್ತ್ರಜ್ಞ ಎರಡು ಮೂಲ ಶಿಲಾಪಾಕಗಳಿವೆ, ಅವೆರಡೂ ಬೆಸಾಲ್ಟ್‍ಜಾತಿಯವೆಂದೂ ಅದರಲ್ಲಿ ಒಂದು ಆಲವೀನ್‍ನಿಂದ ಕೂಡಿ ಹೆಚ್ಚು ಕ್ಷಾರಶಿಲಾಪಾಕದೆಂದೂ ಇನ್ನೊಂದು ಸ್ವಲ್ಪ ಬೆಣಚಿನಿಂದ ಕೂಡಿ ಕಡಿಮೆ ಕ್ಷಾರದ ಶಿಲಾಪಾಕ ವೆಂದೂ ತಿಳಿಸಿದ್ದಾನೆ. ಬವೆನ್ ಎಂಬ ಶಿಲಾಶಾಶ್ತ್ರಜ್ಞ ಬೆಸಾಲ್ಟ್ ಶಿಲಾಪಾಕ ವೊಂದೇ ಮೂಲಶಿಲಾಪಾಕವೆಂದು ಅಭಿಪ್ರಾಯಪಟ್ಟಿದ್ದಾನೆ.

	ನಿಯತವಾದ ಒಂದೆರಡು ಶಿಲಾಪಾಕಗಳು ಪ್ರಭೇದವನ್ನು ಹೊಂದುವುದರಿಂದ, ಸಾಮಾನ್ಯವಾದ ಅನೇಕ ಅಗ್ನಿಶಿಲೆಗಳು ಉಂಟಾಗುತ್ತ ವೆಂಬುದು ಬಹುಮತ. ಈ ಪ್ರಭೇದ ವಿವಿಧ ರೀತಿಗಳಲ್ಲಿ ಆಗುತ್ತವೆ. ಅವುಗಳಲ್ಲಿ ಬಲು ಮುಖ್ಯವಾದವು: ಆಂಶಿಕ ಸ್ಫಟಿಕೀಕರಣ ಮತ್ತು ಇತರ ಶಿಲೆಗಳನ್ನು ಜೀರ್ಣಿಸಿಕೊಳ್ಳುವಿಕೆ.

	ಶಿಲಾಪಾಕದಲ್ಲಿ ಎಲ್ಲ ಖನಿಜಗಳ ಅಂಶಗಳೂ ಸೇರಿಕೊಂಡಿರುವುವು. ಈ ಖನಿಜಗಳು ಹೆಚ್ಚಾಗಿ ಇದ್ದು ಭಿನ್ನಭಿನ್ನ ಗುಣಗಳನ್ನು ಪ್ರದರ್ಶಿಸುತ್ತವೆ. ಆದ್ದರಿಂದ ಇವು ವಿವಿಧ ಉಷ್ಣತೆಗಳಲ್ಲಿ ಶಿಲಾಪಾಕದಿಂದ ಸ್ಫಟಿಕೀಕರಣ ಗೊಳ್ಳುತ್ತವೆ. ಈ ಗುಣವನ್ನು ಮುಖ್ಯ ಆಧಾರವಾಗಿಟ್ಟುಕೊಂಡು ಶಿಲಾ ಶಾಸ್ತ್ರಜ್ಞ ಬವೆನ್ ಎಂಬವ ಶಿಲಾಪಾಕ ಆರುವಾಗ ವಿವಿಧ ಘಟ್ಟಗಳಲ್ಲಿ ಬೇರೆ ಬೇರೆ ಖನಿಜಗಳ ಸಮೂಹಗಳು ಸ್ಫಟಿಕೀಕರಣಗೊಂಡು ಬೇರ್ಪಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾನೆ. ತನ್ನ ಈ ವಾದವನ್ನು ಪುಷ್ಟೀಕರಿಸಲು ವಿವಿಧ ಅಗ್ನಿಶಿಲೆಗಳಲ್ಲಿಯ ಖನಿಜಗಳ ಸಂಯೋಜನೆ ಯನ್ನು ಉದಾಹರಿಸಿದ್ದಾನೆ. ಕೆಲವು ಶಿಲೆಗಳಲ್ಲಿಯ ಖನಿಜಗಳು ಇತರ ಶಿಲೆಗಳಲ್ಲಿಯ ಖನಿಜಗಳೊಂದಿಗೆ ಎಂದಿಗೂ ಬೆರೆಯಲು ಅವಕಾಶವಿಲ್ಲದಿ ರುವುದನ್ನು ಪ್ರತಿಪಾದಿಸಿ, ಕೆಲವು ಜಾತಿಯ ಶಿಲೆಗಳಿಗೆ ಮಾತ್ರ ಮೀಸಲಾಗಿ ಇರತಕ್ಕ ಖನಿಜಗಳನ್ನೂ ಉದ್ಧರಿಸಿದ್ದಾನೆ. ಉದಾಹರಣೆಗೆ ಅತಿ ಕ್ಷಾರಶಿಲೆಗಳ ಗುಂಪಿಗೆ ಸೇರಿರುವ ಪೆರಿಡೊಡೈಟ್ ಶಿಲೆಯಲ್ಲಿ ಆಲಿವೀನ್ ಮತ್ತು ಪೈರಾಕ್ಸೀನ್ ಖನಿಜಗಳು ಮತ್ತು ಸ್ವಲ್ಪಮಟ್ಟಿಗೆ ಅನಾರ್ತೈಟ್ ಎಂಬುದು ಸಹಜವಾಗಿ ಸೇರಿಕೊಂಡಿರುವುವು. ಇವು ಶಿಲಾಪಾಕ ಪ್ರಭೇದದ ಆದಿಯಲ್ಲಿ ಹೆಚ್ಚು ಉಷ್ಣತೆ ಇರುವಾಗ ಉದ್ಭವವಾಗುತ್ತವೆ. ಕೆಲವು ಗ್ರ್ಯಾನೈಟ್ ಮುಂತಾದ ಆಮ್ಲಶಿಲೆಗಳಲ್ಲಿ ಬೆಣಚು ಆರ್ತೋಕ್ಲೆಸ್ ಮತ್ತು ಆಲ್ಬೈಟ್‍ಗಳಲ್ಲದೆ ಕೇವಲ ಕಪ್ಪು ಅಭ್ರಕ ಸೇರಿಕೊಂಡಿರುತ್ತವೆ. ಶಿಲಾಪಾಕ ಆರಿ ಕೊನೆಯಲ್ಲಿ ಬಹುಪಾಲು ಸ್ಫಟಿಕೀಕರಣವಾದ ಮೇಲೆ ಈ ಖನಿಜಗಳು ಉತ್ಪನ್ನವಾಗುವುವು. ಆದ್ದರಿಂದ ಎಂದಿಗೂ ಮೊದಲು ಉತ್ಪನ್ನವಾದ ಆಲಿವೀನ್ ಮತ್ತು ಅಂತಿಮವಾಗಿ ಉತ್ಪನ್ನವಾದ ಬೆಣಚು ಅಥವಾ ಆರ್ತೋಕ್ಲೇಸ್‍ನೊಂದಿಗೆ ಶಿಲೆಗಳಲ್ಲಿ ಬೆರೆಯುವುದು ಸಾಧ್ಯವಾಗು ವುದಿಲ್ಲ. ಹೀಗೆ ಖನಿಜಗಳ ಪರಸ್ಪರ ಸೇರಿರುವಿಕೆ ಮತ್ತು ಪರಸ್ಪರ ಸೇರದಿರುವಿಕೆ ಆಂಶಿಕ ಸ್ಫಟಿಕೀಕರಣವನ್ನು ಸ್ಥಿರಗೊಳಿಸುತ್ತದೆ.

	ಶಿಲಾಪಾಕದ ಆಂಶಿಕ ಸ್ಫಟಿಕೀಕರಣದ ಪ್ರಾರಂಭದಲ್ಲಿ ಹರಳುಗಳಾಗಿ ಉತ್ಪನ್ನವಾದ ಆಲಿವೀನ್, ಕ್ರೋಮೈಟ್, ಸ್ಪಿನೆಲ್‍ಗಳು ಮುಂತಾದವು ಹೆಚ್ಚು ಘನವುಳ್ಳದ್ದಾಗಿದ್ದು ಶಿಲಾಪಾಕದ ತಳದಲ್ಲಿ ಅವಪಾತವಾಗಿ ಶೇಖರಗೊಳ್ಳುವುವು. ಮೇಲಿರುವ ತಿಳಿ ಶಿಲಾಪಾಕ ತನ್ನ ಸಂಯೋಜನೆ ಯಲ್ಲಿ ವ್ಯತ್ಯಾಸವನ್ನು ಹೊಂದಿ ಆರ್ತೋಕ್ಲೇಸ್, ಬೆಣಚು ಮತ್ತು ಕಪ್ಪು ಅಭ್ರಕ ಮುಂತಾದ ಖನಿಜಗಳ ಸಮೂಹ ಹರಳುಗಳಾಗಲು ಅವಕಾಶವಾಗುತ್ತದೆ. ಈ ಆಂಶಿಕ ಸ್ಫಟಿಕೀಕರಣದ ಸಮಯದಲ್ಲಿ ಒತ್ತಡ ಇಲ್ಲವೆ ಇತರ ಕಾರಣಗಳಿಂದಾಗಿ ಶಿಲಾಪಾಕದ ತಿಳಿಯಾದ ಮೇಲ್ಭಾಗ ಹೊರಕ್ಕೆ ಚಿಮ್ಮಲ್ಪಟ್ಟು ದೂರದಲ್ಲಿ ಇನ್ನೊಂದು ವಿಧದ ಶಿಲೆಯಾಗಲೂ ಬಹುದು. ಇದಕ್ಕೆ ಫಿಲ್ಟರ್‍ಪ್ರೆಸ್ ಕ್ರಿಯಾತಂತ್ರದ ಆಂಶೀಕರಣ ಎಂದು ಹೆಸರು. ಗ್ರ್ಯಾನೋಫೈಕ್ ಮುಂತಾದ ಶಿಲೆಗಳು ಈ ರೀತಿ ಉತ್ಪನ್ನವಾದ ವೆಂದು ಅಭಿಪ್ರಾಯಪಡಲಾಗಿದೆ.

	ಶಿಲಾಪಾಕ ಪ್ರಭೇದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಶಿಲಾಪಾಕ ತನ್ನ ಹೊರಗಿನ ವಸ್ತುವನ್ನು ಜೀರ್ಣಿಸಿಕೊಳ್ಳುವುದು. ಅಧಿಕ ಉಷ್ಣತೆಯಿಂದ ಶಿಲಾ ಗೋಳದಲ್ಲಿಯ ಬಹುತೇಕ ಶಿಲೆಗಳು ಕರಗಿ ಶಿಲಾಪಾಕ ಉತ್ಪನ್ನವಾಗುವುದು. ಆದ್ದರಿಂದ ಶಿಲಾಪಾಕ ಹೆಚ್ಚು ಉಷ್ಣತೆ ಮತ್ತು ರಾಸಾಯನಿಕ ಚುರುಕಿನಿಂದಾಗಿ ತನ್ನ ಪರಿಸರದ ಇತರ ಶಿಲೆಗಳನ್ನು ನುಂಗುವುದು ಸಾಧ್ಯವಿದೆ. ಆ ಶಿಲೆಗಳನ್ನು ನುಂಗುವಾಗ ತನ್ನಲ್ಲಿಯ ಕೆಲವು ಅಂಶಗಳನ್ನು ಪರಿಸರದ ಶಿಲಾಸ್ತೋಮಗಳಿಗೆ ವರ್ಗಾಯಿಸುತ್ತದೆ. ಇದಕ್ಕೆ ಆಧುನಿಕ ವಿಜ್ಞಾನಪರಿಭಾಷೆಯಲ್ಲಿ ಆಯಾನ್ ಎಕ್ಸ್‍ಚೇಂಜ್ ಎಂದು ಹೆಸರು. ಇದರಿಂದ ಶಿಲಾಪಾಕದ ಸಂಯೋಜನೆಯಲ್ಲಿ ಬಲು ವ್ಯತ್ಯಾಸಗಳುಂಟಾಗುವುವು. ಹೀಗೆ ಮಾರ್ಪಾಡುಹೊಂದಿದ ಶಿಲಾಪಾಕ ಘನೀಭವಿಸಿ ಸ್ಫಟಿಕೀಕರಣಗೊಳ್ಳುವಾಗ ಭಿನ್ನ ಭಿನ್ನ ಶಿಲೆಗಳಾಗುತ್ತವೆ. ಕೆಲವು ಜಾತಿಯ ಡಯೊರೈಟ್ ಶಿಲೆಗಳು ಉತ್ಪನ್ನವಾಗುವುದು ಈ ಕ್ರಮದಲ್ಲಿ. ಕೆಲವು ವಿಶೇಷ ಬಗೆಯ ಕ್ಷಾರೀಯ ಶಿಲೆಗಳು ಸಹ ಈ ರೀತಿ ಉತ್ಪನ್ನವಾದವೆಂದು ಅಭಿಪ್ರಾಯಪಡಲಾಗಿದೆ. ಡ್ಯಾಲಿ ಎಂಬ ಶಿಲಾಶಾಸ್ತ್ರಜ್ಞ 230 ಸ್ಥಳಗಳಲ್ಲಿ ಕ್ಷಾರೀಯ ಶಿಲೆಗಳ ವಿಷಯವನ್ನು ಅಧ್ಯಯನ ಮಾಡಿದ. ಅವುಗಳ ಪೈಕಿ 160 ಸ್ಥಳಗಳಲ್ಲಿ ಈ ಶಿಲೆಗಳ ಪರಿಸರದಲ್ಲಿಯೂ ಇವುಗಳೊಳಗೂ ಸುಣ್ಣ ಕಲ್ಲುಗಳಿರುವುದನ್ನು ಗಮನಿಸಿದ. ಹೀಗಾಗಿ ಡ್ಯಾಲಿ ಶಿಲಾಪಾಕ ಸುಣ್ಣಕಲ್ಲನ್ನು ಜೀರ್ಣಿಸಿಕೊ ಳ್ಳುವುದರಿಂದ ಕ್ಷಾರೀಯಶಿಲೆಗಳು ರೂಪುಗೊಳ್ಳುವುದೆಂದು ತಿಳಿಸಿದ.

	ಶಿಲಾಪಾಕ ಅನ್ಯಶಿಲೆಗಳನ್ನು ನುಂಗಿ ಜೀರ್ಣಿಸಿಕೊಳ್ಳುವ ಸಾಮಥ್ರ್ಯದ ವಿಷಯವಾಗಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಶಿಲಾಪಾಕಕ್ಕೆ ಇತರ ಶಿಲೆಗಳನ್ನು ನುಂಗತಕ್ಕ ಸಾಮಥ್ರ್ಯ ವಿಪರೀತ ಇದೆ ಎಂದು ಹೇಳಿದರೆ ಮತ್ತೆ ಕೆಲವರು ಈ ಕಾರ್ಯಕ್ಕೆ ಸಾಕಾಗುವಷ್ಟು ಹೆಚ್ಚಿನ ಉಷ್ಣತೆ ಅಥವಾ ಸಾಮಥ್ರ್ಯ ಶಿಲಾಪಾಕಕ್ಕೆ ಇಲ್ಲ ಎಂದಿದ್ದಾರೆ.

	ಶಿಲಾಪಾಕ ಪ್ರಭೇದಕ್ಕೆ ಮೇಲಿನೆರಡು ಕಾರಣಗಳು ಬಲುಮುಖ್ಯವಾಗಿ ರುವುವಾದರೂ ಇನ್ನೂ ಹಲವಾರು ಇತರ ಕಾರಣಗಳೂ ಇವೆ. ಶಿಲಾಪಾಕದಲ್ಲಿ ಅಡಗಿರುವ ಹಬೆಯ ರೂಪದ ನೀರಾವಿ, ಕಾರ್ಬನ್‍ಡೈ ಆಕ್ಸೈಡ್, ನೈಟ್ರೊಜನ್, ಹೈಡ್ರೊಜನ್, ಗಂಧಕ ಮುಂತಾದವೂ ಶಿಲಾಪಾಕದಲ್ಲಿ ಪ್ರಭೇದವನ್ನು ಕಲ್ಪಿಸಲು ಸಹಾಯ ಮಾಡುತ್ತವೆ. ಅಲ್ಲದೆ ಶಿಲಾಪಾಕ ಘನೀಕೃತವಾದ ತರುಣದಲ್ಲಿ. ಅದರಿಂದ ಅಂತಿಮವಾಗಿ ಹೊರಬಿದ್ದ ದ್ರಾವಣಗಳು, ಇತರ ಬಾಷ್ಪಗಳು, ಶಿಲೆಗಳಲ್ಲಿ ಆಗತಾನೆ ಜನಿಸಿರುವ ಖನಿಜಗಳ ರಂಧ್ರಗಳು ಮತ್ತು ಬಿರುಕುಗಳಲ್ಲಿ ನುಗ್ಗಿ ಆ ಖನಿಜಗಳನ್ನು ಮಾರ್ಪಡಿಸಿ ವಿಭಿನ್ನ ಶಿಲೆಗಳನ್ನು ಉಂಟು ಮಾಡುವುವು. ಉದಾಹರಣೆಗೆ ಡನೈಟ್ ಎಂಬ ಅತಿಕ್ಷಾರಶಿಲೆ ಸರ್ಪೆಂಟೀನ್ ಎಂಬ ಮೃದುಶಿಲೆಯಾಗಿ ಮಾರ್ಪಾಡಾಗುತ್ತದೆ.			  
 
	ಶಿಲಾರಚನೆ: ಶಿಲೆಗಳ ಹೊರಮೈರಚನೆ ಮತ್ತು ಸ್ವರೂಪ. ಶಿಲೆಗಳು ವಿವಿಧ ಬಗೆಯ ಬಾಹ್ಯರಚನೆಯನ್ನು ಪ್ರದರ್ಶಿಸುತ್ತವೆ. ಬಾಹ್ಯರಚನೆಗಳನ್ನು ಕುರಿತ ಭೂವಿಜ್ಞಾನಭಾಗಕ್ಕೆ ಶಿಲಾರಚನಾವಿಜ್ಞಾನ ಎಂದು ಹೆಸರು. ಬಾಹ್ಯರಚನೆಯನ್ನು ಯಾವುದೇ ವಿಶೇಷ ಸಾಧನದ ಸಹಾಯವಿಲ್ಲದೇ ಸುಲಭವಾಗಿ ಗುರುತಿಸಬಹುದು. ಇವು ಶಿಲೆ ಮೈದಳೆದ ಪರಿಯನ್ನು ಸೂಚಿಸುತ್ತವೆ. ಶಿಲೆಯ ರಚನೆಗೂ ಅದರ ಉತ್ಪತ್ತಿಗೂ ನಿಕಟಸಂಬಂಧ ಉಂಟು. ಅಗ್ನಿಶಿಲೆಗಳು, ಅವಸಾದನಶಿಲೆಗಳು, ರೂಪಾಂತರಶಿಲೆಗಳು ಮುಂತಾದವುಗಳ ರಚನೆಗಳಲ್ಲಿ ಭಿನ್ನತೆ ಇದೆ.

	ಅಗ್ನಿಶಿಲೆಗಳ ರಚನೆಗಳು ಅವು ಭೂಗರ್ಭದಿಂದ ಹೊರಬಂದ ರೀತಿ ಮತ್ತು ಯಾವ ಭೂಭಾಗದ ಮೂಲಕ ಅವು ಚಲಿಸುತ್ತವೊ ಆ ಭೂಭಾಗದ ರಚನೆ ಇವನ್ನು ಅವಲಂಬಿಸಿವೆ. ಮ್ಯಾಗ್ಮ (ಮಾತೃಶಿಲಾದ್ರವ) ಅವಸಾದನಶಿಲೆಗಳ ಪ್ರಸ್ತರಗಳ ಮಧ್ಯೆ ಪ್ರವಹಿಸಿ ಸಿಲ್ ಎನಿಸಿಕೊಳ್ಳುವ, ಅಷ್ಟು ಮಂದವಲ್ಲದ ಪ್ರಸ್ತರೀ ರಚನೆಯನ್ನು ಪಡೆಯುತ್ತದೆ. ಮ್ಯಾಗ್ಮ ಜಿಗುಟಾಗಿದ್ದಲ್ಲಿ ಅದಕ್ಕೆ ಅಧಿಕ ವಿಸ್ತಾರವನ್ನು ಆಕ್ರಮಿಸಲು ಸಾಧ್ಯವಾಗು ವುದಿಲ್ಲ. ಅದು ಹೊರಬಂದ ದ್ವಾರದ ಸುತ್ತಮುತ್ತ ಶೇಖರವಾಗುತ್ತ ಮೇಲ್ಭಾಗದ ಶಿಲಾಪ್ರಸ್ತರವನ್ನು ಕ್ರಮೇಣ ಮೇಲಕ್ಕೆ ತಳ್ಳುತ್ತ ಕೊನೆಯಲ್ಲಿ ಕಡುಬಿನ ಆಕಾರ ತಳೆಯುತ್ತದೆ. ಈ ಬಗೆಯ ಶಿಲಾಕೃತಿಗೆ ಲ್ಯಾಕೋಲಿತ್ ಎಂದು ಹೆಸರು.

	ಇವಕ್ಕೆ ತದ್ವಿರುದ್ಧವಾದ ಆಕೃತಿಗಳು ಎಂದರೆ ಡೈಕ್ ಮತ್ತು ಬ್ಯಾತೋಲಿತ್. ಇವು ಶಿಲಾಪ್ರಸ್ತರಗಳನ್ನು ಅನುಸರಿಸಿಕೊಂಡು ಹೊರಬರದೆ ಅವನ್ನು ಛೇದಿಸಿಕೊಂಡು ಮೈದೋರುತ್ತವೆ. ಡೈಕುಗಳನ್ನು ಗೋಡೆಗಳಿಗೆ ಹೋಲಿಸಬಹುದು. ಈ ಕಾರಣ ಇವಕ್ಕೆ ಒಡ್ಡುಶಿಲೆಗಳು ಎಂದು ಹೆಸರಾಗಿದೆ. ಮ್ಯಾಗ್ಮ ಮಾತೃ ಶಿಲಾದ್ರವ ನೀಳವಾದ ಸೀಳುಗಳಲ್ಲಿ ಅಥವಾ ಬಿರುಕುಗಳಲ್ಲಿ ಪ್ರವಹಿಸಿ ಕ್ರಮೇಣ ಆರಿ ಹೆಪ್ಪುಗಟ್ಟಿ ಡೈಕುಗಳಾಗಿ ಕಾಣಿಸಿಕೊಳ್ಳುತ್ತವೆ. ಇವುಗಳ ಉದ್ದ ಕೇವಲ ಕೆಲವು ಸೆಂಮೀಗಳಿಂದ ಹಲವಾರು ಕಿಮೀಗಳವರೆಗೆ. ಅಗಲ ಹಲಕೆಲವು ಸೆಂಮೀಗಳಿಂದ 1500-1800ಸೆಂಮೀ ವರೆಗೆ. ಇವುಗಳ ಹೊರಾಕೃತಿ ಕೆಲವು ವೇಳೆ ವೃತ್ತದಂತಿರುವುದರಿಂದ ಇಂಥವಕ್ಕೆ ವೃತ್ತಾಕಾರದ ಡೈಕ್ ಅಥವಾ ಸುತ್ತು ಒಡ್ಡುಗಳು ಎಂದು ಹೆಸರಿದೆ.
	ಬ್ಯಾತೊಲಿತ್‍ಗಳು ಬೃಹದಾಕಾರದ ಶಿಲಾರಚನೆಗಳು. ಸಾಮಾನ್ಯವಾಗಿ ಇವಕ್ಕೂ ಪರ್ವತಶ್ರೇಣಿಗಳಿಗೂ ನಿಕಟಸಂಬಂಧ ಇದೆ. ಇವು ಪರ್ವತಶ್ರೇಣಿಗಳಿಗೆ ಸಮಾಂತರವಾಗಿರುತ್ತವೆ. ಅತ್ಯಂತ ದೊಡ್ಡ ಬ್ಯಾತೊಲಿತ್ ಎನಿಸಿರುವ ಅಲಾಸ್ಕ-ಬ್ರಿಟಿಷ್ ಕೊಲಂಬಿಯ ಬ್ಯಾತೊಲಿತ್‍ನ ಉದ್ದ ಸು. 1800 ಕಿಮೀ; ಅಗಲ ಸು. 75 ಕಿಮೀ.
	
ಮಾತೃಶಿಲಾದ್ರವ ಭೂಮಿಯ ಮೇಲೆ ಪ್ರವಹಿಸಿದಾಗ ಅದರಲ್ಲಿ ಹುದುಗಿರುವ ಅನಿಲಗಳು ಹೊರ ಬರುತ್ತವೆ. ಆ ಸಂದರ್ಭದಲ್ಲಿ ಅನಿಲ ಹೊರಬಂದ ಜಾಡನ್ನು ಅನುಸರಿಸಿ ಗುಳ್ಳೆ ಅಥವಾ ರಂಧ್ರಗಳು ಉಂಟಾಗಿ ಶಿಲೆಯಲ್ಲಿ ಒಂದು ವಿಶೇಷ ತೆರನ ರಚನೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ರಂಧ್ರರಚನೆ ಎಂದು ಹೆಸರು. ಅನೇಕ ವೇಳೆ ಈ ರಂಧ್ರಗಳಲ್ಲಿ ಹಲವು ಬಗೆಯ ಖನಿಜಗಳು ಶೇಖರವಾಗುವುದುಂಟು. ಇಂಥವನ್ನು ಅಮಿಗ್ಡಲಾಯ್ಡಲ್ ರಚನೆ ಎಂದು ಕರೆಯುತ್ತಾರೆ. ಲಾವಾ ಪ್ರವಾಹದಲ್ಲಿ ನಾನಾ ಗಾತ್ರದ ಹಲವಾರು ಶಿಲಾವಿಚಿದ್ರಗಳು ಸೇರಿಹೋಗುವುದುಂಟು. ಈ ಬಗೆಯ ಅಗ್ನಿಶಿಲೆಗೆ ಬ್ಲಾಕ್‍ಲಾವಾ ಎಂದು ಹೆಸರು. ಹಲವು ಲಾವಾಗಳು ಅಧಿಕ ದ್ರವತ್ವವನ್ನು ಹೊಂದಿರುತ್ತವೆ. ಹಗ್ಗದೋಪಾದಿಯಲ್ಲಿ ನುಲಿದಿರುವಂಥ ರಚನೆಯನ್ನು ಪಡೆಯುತ್ತವೆ. ಇವಕ್ಕೆ ರೋಪಿಲಾವಾ ಎಂದು ಹೆಸರು. ಲಾವಾ ನೀರಿನೊಳಗೆ ಅಥವಾ ಜೌಗುಪ್ರದೇಶದ ಮೂಲಕ ಪ್ರವಹಿಸಿದಾಗ ದಿಂಬಿನ ಆಕಾರ ಹೊಂದುವುದೂ ಉಂಟು. ಈ ಕಾರಣ ಇವನ್ನು ಪಿಲ್ಲೋಲಾವಾ ಎಂದು ಕರೆಯುತ್ತಾರೆ.

	ಅವಸಾದನಶಿಲೆಗಳಲ್ಲಿ ಎರಡು ಬಗೆಯ ರಚನೆಗಳಿವೆ: 1. ಪದರಗಳ ಸಂಗ್ರಹಣದೊಡನೆ ಉಂಟಾದ ರಚನೆಗಳು ಮತ್ತು ಆಕೃತಿಗಳು. ಇವು ಮೂಲ ರಚನೆಗಳು. 2. ಸಂಗ್ರಹಣ ಕಾರ್ಯ ಮುಗಿದ ಅನಂತರ ಉಂಟಾದ ರಚನೆಗಳು. ಇವು ಉಪರಚನೆಗಳು.

	1. ಮೂಲರಚನೆಗಳು: ಇವುಗಳಲ್ಲಿ ಮುಖ್ಯವಾದವು ಪ್ರಸ್ತರಗಳಾದ ಗ್ರೇಡೆಡ್ ಸ್ತರಗಳು ಮತ್ತು ಅಲೆಗುರುತುಗಳು. ನೆಲಭಾಗಗಳು ಶಿಥಿಲೀಕರಣಕ್ಕೆ ಒಳಗಾಗಿ ಒಡೆದು ಸಣ್ಣ ಚೂರುಗಳಾಗುತ್ತವೆ. ಈ ಚೂರುಗಳನ್ನು ಕ್ರಮೇಣ ಬೀಸುವ ಗಾಳಿಯೊ ಹರಿಯುವ ನೀರೊ ಹೊತ್ತು ಅಂತಿಮವಾಗಿ ಸಮುದ್ರದ ತಳವನ್ನು ಮುಟ್ಟಿಸುತ್ತವೆ. ಶೇಖರಣೆ ಮುಂದುವರಿದಂತೆಲ್ಲ ಕಣಗಳು ಕ್ರಮೇಣ ಒಟ್ಟುಗೂಡಿ ಪದರ ಇಲ್ಲವೆ ಸ್ತರಗಳಾಗಿ ಮಾರ್ಪಡುತ್ತವೆ. ಈ ಕ್ರಿಯೆಗೆ ಪ್ರಸ್ತರೀಕರಣ ಅಥವಾ ಸ್ತರೀಕರಣ ಎಂದು ಹೆಸರು. ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡದಿರುವ ಕಣಗಳು ಅಡಿಭಾಗದಲ್ಲೂ ಸಣ್ಣಕಣಗಳು ಮೇಲ್ಭಾಗದಲ್ಲೂ ಸಂಚಿತವಾಗು ತ್ತವೆ. ಮೇಲಿನ ಪದರಗಳಿಗೆ ಬಂದಂತೆ ಕಣಗಾತ್ರ ಕಡಿಮೆಯಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಈ ಬಗೆಯ ರಚನೆ ಉತ್ತಮ ರೀತಿಯಲ್ಲಿ ನಡೆದಿದೆ. ಇಂಥವಕ್ಕೆ ಶ್ರೇಣಿತ ಸ್ತರಗಳೆಂದು ಹೆಸರು. ಒಂದು ನಿರ್ದಿಷ್ಟ ಪ್ರದೇಶದ ಸ್ತರಗಳು ಬಣ್ಣ, ರಚನೆ ಮತ್ತು ಖನಿಜಸಂಯೋಜನೆಗಳಲ್ಲಿ ಒಂದೇ ರೀತಿಯಾಗಿರದೆ ಹಲ ಕೆಲವು ನಿರ್ದಿಷ್ಟ ವ್ಯತ್ಯಾಸಗಳನ್ನೂ ತೋರಿಸುತ್ತವೆ.

	ಶಿಲಾಕಣಗಳನ್ನು ಹೊತ್ತ ನದಿ ಸಮುದ್ರವನ್ನು ಸೇರುವಾಗ ಅದರ ವೇಗ ಬಲು ಮಂದಗತಿಯದ್ದಾಗಿ ಅದು ದಪ್ಪ ದಪ್ಪ ಕಣಗಳನ್ನು ಸಾಗರದ ಅಂಚಿನಲ್ಲೇ ಅಷ್ಟೊಂದು ಆಳವಿಲ್ಲದ (ಅಂದರೆ ತೆಟ್ಟೆ) ಭಾಗಗಳಲ್ಲಿ ಕಳಚಿ, ಸೂಕ್ಷ್ಮ ಮತ್ತು ಸಣ್ಣಕಣಗಳನ್ನು ಮಾತ್ರ ಮುಂದೆ ಮುಂದೆ ಸಾಗಿಸಿಕೊಂಡು ಆಳಭಾಗಗಳಿಗೆ ಹೋಗುತ್ತದೆ. ಹೀಗಾಗಿ ಸಾಗರದ ಅಂಚು ಪ್ರದೇಶಗಳಲ್ಲಿ ದಪ್ಪ ಕಣಗಳಿಂದ ಕೂಡಿದ ಗುಂಡುಶಿಲೆ, ನುರುಜುಶಿಲೆ ಮತ್ತು ಮರಳು ಶಿಲೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದೇ ಜಾಡಿನಲ್ಲಿ ನೀರಿನ ಅಲೆಗಳ ಚಟುವಟಿಕೆಯೂ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿರುತ್ತದೆ. ಮರಳುಶಿಲೆ ಪೂರ್ಣವಾಗಿ ಆರಿ ಗಡುಸಾಗದೆ ಇರುವ ಸಮಯದಲ್ಲಿ ಅಲೆಗಳ ಕಾರ್ಯಾಚರಣೆಯಿಂದ ಅವುಗಳ ಮೇಲ್ಭಾಗದಲ್ಲಿ ಗುರುತುಗಳು ಉಂಟಾಗಬಹುದು. ಇವಕ್ಕೆ ಅಲೆಗುರುತು ಗಳು ಎಂದು ಹೆಸರು.

	2. ಉಪರಚನೆಗಳು: ಇವು ಶಿಲಾ ಪ್ರಸ್ತರಗಳು ಸಂಚಿತವಾದ ಅನಂತರ ತಲೆದೋರುವ ಭೂಮಿಯ ಬದಲಾವಣೆಗಳಿಂದ ಉಂಟಾಗುತ್ತವೆ. ಸೀಳುಗಳು, ಮಡಿಕೆಗಳು ಮತ್ತು ಸ್ತರಭಂಗಗಳು ಈ ಗುಂಪಿನಲ್ಲಿ ಸೇರುತ್ತವೆ.

	ಸೀಳುಗಳನ್ನು ಸಾಮಾನ್ಯವಾಗಿ ವಿವಿಧ ಪ್ರದೇಶಗಳಲ್ಲಿ ನೋಡಬಹುದು ಮಾತ್ರವಲ್ಲ ತೀರಕಷ್ಟವಿಲ್ಲದೆ ಗುರುತಿಸಬಹುದು ಕೂಡ. ಶಿಲಾಸ್ತರಗಳು ಎರಡು ಕಡೆಗಳಲ್ಲೂ ಅಧಿಕ ಒತ್ತಡಕ್ಕೆ ಈಡಾಗಿ ಮಡಿಕೆಗಳು ಉಂಟಾಗುತ್ತವೆ. ಮಡಿಕೆಗಳಲ್ಲಿ ಮೇಲ್ಮಡಿಕೆ (ಆ್ಯಂಟಿಕ್ಲೈನ್) ಮತ್ತು ಕೀಳ್ಮಡಿಕೆ (ಸಿನ್‍ಕ್ಲೈನ್) ಎಂಬ ಎರಡು ಮುಖ್ಯ ರಚನೆಗಳಿವೆ.

	ಮೇಲ್ಮಡಿಕೆ ಕಮಾನಿನಂತೆ ಇದೆ. ಸ್ತರಗಳು ಮಡಿಕೆಯ ಅಕ್ಷದಿಂದ ಹೊರಗೆ ಇಳಿಮುಖವಾಗಿರುತ್ತವೆ. ಕೀಳ್ಮಡಿಕೆಗಳು ತದ್ವಿರುದ್ಧವಾಗಿ ಬಾಣಲೆಯಂತೆ ಇರುತ್ತವೆ. ಸ್ತರಗಳು ಮಡಿಕೆಯ ಒಳಗಡೆಗೆ ಇಳಿಮುಖ ವಾಗಿರುತ್ತವೆ. ಮಡಿಕೆಯ ಅಕ್ಷರೇಖೆ ನೇರವಾಗಿದ್ದು ಅದರ ಇಕ್ಕೆಲಗಳಲ್ಲಿಯ ಇಳಿವೋರೆ ಒಂದೇ ಸಮವಾಗಿದ್ದಲ್ಲಿ ಅಂಥದ್ದನ್ನು ಅನುರೂಪ ಮಡಿಕೆ ಯೆಂದೂ ಅಕ್ಷರೇಖೆ ಮಾಡಿಕೊಂಡಿದ್ದು ಇಕ್ಕೆಲಗಳ ಸ್ತರಗಳ ಇಳಿವೋರೆ ಅಸಮವಾಗಿದ್ದಲ್ಲಿ ಅನನುರೂಪ ಮಡಿಕೆಯೆಂದೂ ಹೆಚ್ಚು ವಾಲಿಕೊಂಡಿದ್ದು ಮಟ್ಟವಾಗಿದ್ದಲ್ಲಿ ಒರಗಿದ (ರಿಕಂಬೆಂಟ್) ಮಡಿಕೆಯೆಂದೂ ಕರೆಯುವುದಿದೆ.

	ಭೂಭಾಗಗಳು ಅಧಿಕ ಒತ್ತಡ ವ್ಯತ್ಯಾಸಗಳಿಗೆ ಒಳಗಾದಾಗ ಆ ಭಾಗದ ಸ್ತರಗಳಲ್ಲಿ ಸೀಳು ಅಥವಾ ಬಿರುಕುಗಳಿರುವ ಕಡೆ ರಚನೆಯಲ್ಲಿ ಏರುಪೇರುಗಳು ಉಂಟಾಗುತ್ತವೆ. ಹೀಗಾದಾಗ ಹಲವು ಬಾರಿ ಸೀಳಿನುದ್ದಕ್ಕೂ ಪರಸ್ಪರ ಹೊಂದಿಕೊಂಡಿದ್ದ ಭಾಗಗಳು ಮೇಲಕ್ಕೂ ಕೆಳಕ್ಕೂ ಸರಿಯುವುದುಂಟು. ಇವಕ್ಕೆ ಸ್ತರಭಂಗಗಳು ಎಂದು ಹೆಸರು. ಚಲನೆಯ ಜಾಡನ್ನು ಸ್ತರಭಂಗ ಜಾಡು ಎನ್ನುವುದಿದೆ. ಮಡಿಕೆಗಳು ಮತ್ತು ಸ್ತರಭಂಗಗಳು ಆಲ್ಫ್ಸ್ , ಹಿಮಾಲಯ ಮೊದಲಾದ ಪರ್ವತ ಶ್ರೇಣಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

	ರೂಪಾಂತರಶಿಲೆಗಳಲ್ಲಿ ಹೆಚ್ಚಿನ ಉಷ್ಣ ಮತ್ತು ಒತ್ತಡಗಳ ದೆಸೆಯಿಂದ ಹೊಸ ಹೊಸ ರಚನೆಗಳು ಮೈದಳೆಯುತ್ತವೆ. ಇಂಥಲ್ಲಿ ಒತ್ತಡದ್ದೇ ಅಧಿಕ ಪ್ರಭಾವ. ಶಿಲೆಗಳು ರೂಪಾಂತರಕ್ಕೆ ಒಳಗಾದಾಗ ಅವುಗಳಲ್ಲಿಯ ಕೆಲವು ನೀಳಾಕಾರದ ಖನಿಜಗಳು ಪರಸ್ಪರ ಸಮಾಂತರ ಜಾಡುಗಳಲ್ಲಿ ಪುನರ್ವವ್ಯಸ್ಥಿತವಾಗುತ್ತವೆ. ಇದು ರೇಖೀಕರಣ (ಲೀನಿಯೇಷನ್) ರಚನೆ. ನೈಸ್‍ಶಿಲೆ ಇಂಥ ರಚನೆಗೆ ಅತ್ಯುತ್ತಮ ಉದಾಹರಣೆ. ಪದರು ಖನಿಜಗಳು ಒಂದರ ಮೇಲೆ ಒಂದರಂತೆ ಶೇಖರಗೊಂಡು ಒಂದು ತೆರನ ಪದರು ರಚನೆಯನ್ನು ಉಂಟುಮಾಡುತ್ತವೆ. ಈ ಬಗೆಯ ಶಿಲೆಗಳನ್ನು ಪದರುಶಿಲೆಗಳು ಎನ್ನುತ್ತಾರೆ. ಕರ್ನಾಟಕ ರಾಜ್ಯದ ಧಾರವಾಡ ಪದರ ಶಿಲೆಗಳು ಈ ಗುಂಪಿನವು.    
  
	ಶಿಲಾ ವಿನ್ಯಾಸ: ಶಿಲೆಗಳ ಆಂತರಿಕ ರಚನೆಯನ್ನು ಬರಿಯಕಣ್ಣಿನಿಂದ ಅಧ್ಯಯನಮಾಡುವುದು ಸಾಧ್ಯವಾಗದು. ಸೂಕ್ಷ್ಮದರ್ಶದ ಮೂಲಕ ಚೆನ್ನಾಗಿ ಅರಿಯಬಹುದು. ಇದಕ್ಕೆ ಸಾಮಾನ್ಯವಾಗಿ ಮೂಲಶಿಲೆ ಅಥವಾ ಅಗ್ನಿಶಿಲೆಗಳು ಬಲು ಸಹಾಯಕ. ಶಿಲೆಯ ಪೂರ್ಣ ಪರಿಚಯವಾಗ ಬೇಕಾದರೆ ಅದರ ವಿನ್ಯಾಸದ ಅಧ್ಯಯನ ಬಲು ಮುಖ್ಯ. ಈ ಅಧ್ಯಯನದಿಂದ ಶಿಲೆ ಮಾತೃಶಿಲಾದ್ರವದಿಂದ ಘನೀಭೂತಗೊಂಡ ರೀತಿಯನ್ನೂ ಆಗ ಉಂಟಾದ ಭೌತ ಮತ್ತು ರಾಸಾಯನಿಕ ಬದಲಾವಣೆಗಳನ್ನು ಗ್ರಹಿಸುವುದು ಸಾಧ್ಯ.

	ಮ್ಯಾಗ್ಮ (ಮಾತೃಶಿಲಾದ್ರವ) ಅತಿ ಶೀಘ್ರಗತಿಯಲ್ಲಿ ಆರಿ ತಣ್ಣಗಾದರೆ ಅದರಲ್ಲಿ ಯಾವ ಖನಿಜಗಳೂ ಮೈದೋರಿರದೆ ಇಡೀ ಶಿಲೆಯೇ ಒಂದು ಮುದ್ದೆಯಂತೆ ಇರುತ್ತದೆ. ಈ ಮುದ್ದೆಗೆ ಶಿಲಾಕಾಚ ಎಂದು ಹೆಸರು. ಮ್ಯಾಗ್ಮ ಮಂದಗತಿಯಿಂದ ಆರುತ್ತ ಹೋದಲ್ಲಿ ವಿವಿಧ ಖನಿಜಗಳು ತಲೆದೋರಿ ಶಿಲೆ ಖನಿಜಕಣಗಳಿಂದ ಕೂಡಿರುವಂಥ ವಿನ್ಯಾಸ ತೋರುತ್ತದೆ. ಶಿಲಾವಿನ್ಯಾಸದಲ್ಲಿ ಕಣಗಳ ಗಾತ್ರ ಮತ್ತು ಆಕಾರ ಪ್ರಮುಖ ಪಾತ್ರ ವಹಿಸುತ್ತವೆ.

	ಶಿಲೆಯ ಎಲ್ಲ ಖನಿಜಗಳೂ ಚೆನ್ನಾಗಿ ಸ್ಫುಟಗೊಂಡಿದ್ದಲ್ಲಿ ಆ ಬಗೆಯ ವಿನ್ಯಾಸವನ್ನು ಪೂರ್ಣ ಸ್ಫಟಿಕಮಯ (ಹೊಲೋಕ್ರಿಸ್ಟಲೈನ್) ಎಂದೂ ಮುದ್ದೆಯಾಗಿದ್ದಲ್ಲಿ ವಿನ್ಯಾಸವನ್ನು ಪೂರ್ಣಕಾಚಮಯ (ಹೋಲೋಹ ಯಲೀನ್) ಎಂದೂ ಇವೆರಡರ ಮಧ್ಯವರ್ತಿರಚನೆಯ ವಿನ್ಯಾಸ ಇದ್ದಲ್ಲಿ ಅಂಥವನ್ನು ಅರ್ಧಸ್ಫಟಿಕಮಯ (ಹೆಮಿಕ್ರಿಸ್ಟಲೈನ್) ಎಂದೂ ವರ್ಗೀಕರಿಸುವುದಿದೆ.

	ಶಿಲೆಯ ಖನಿಜಕಣಗಳೂ ತಮ್ಮ ಗಾತ್ರದಲ್ಲಿ ಹೆಚ್ಚಿನ ವ್ಯತ್ಯಾಸಗಳನ್ನು ತೋರಬಹುದು. ಕೆಲವೊಂದು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿಯೂ ಮತ್ತೆ ಕೆಲವು ಸುಲಭವಾಗಿ ಗುರುತಿಸಬಹುದಾದಷ್ಟು ದೊಡ್ಡದಾಗಿಯೂ ಇರಬಹುದು. ಈ ಪರಿಮಿತಿ 1:1000 ಪ್ರಮಾಣದಲ್ಲಿದೆ ಎಂಬುದು ಒಂದು ಅಂದಾಜು. ಶಿಲೆಯಲ್ಲಿಯ ಕಣಗಳನ್ನು ಸಾಮಾನ್ಯ ಉಬ್ಬು ಮಸೂರವೊಂದರ ಸಹಾಯದಿಂದ ಇಲ್ಲವೆ ಹಾಗೆಯೇ ಸುಲಭವಾಗಿ ಗುರುತಿಸಿದಲ್ಲಿ ಆ ಬಗೆಯ ವಿನ್ಯಾಸವನ್ನು ಸೂಕ್ಷ್ಮಕಣಮಯ (ಫೆನೆರಿಕ್) ಅಥವಾ ಫೆನೆರೋಕ್ರಿಸ್ಟಲೈನ್ ವಿನ್ಯಾಸವೆಂದೂ ಹೀಗೆ ಗುರುತಿಸಲು ಸಾಧ್ಯವಾಗದಿದ್ದಲ್ಲಿ ಅಂಥ ವಿನ್ಯಾಸವನ್ನು ಕಣರಹಿತ (ಅಫೆನೆರಿಕ್) ವಿನ್ಯಾಸವೆಂದೂ ಕರೆಯುವುದಿದೆ. ಕಣಗಳ ಅಡ್ಡಗಲ 5 ಮಿಮೀಗಳಿಗೆ ಹೆಚ್ಚಿದ್ದಲ್ಲಿ ಸ್ಥೂಲ ವಿನ್ಯಾಸವೆಂದೂ 5-1 ಮಿಮೀಗಳಷ್ಟಿದ್ದರೆ ಮಧ್ಯಮ ವಿನ್ಯಾಸವೆಂದೂ 1ಮಿಮೀಗೂ ಕಡಿಮೆ ಇದ್ದಲ್ಲಿ ಸೂಕ್ಷ್ಮವಿನ್ಯಾಸವೆಂದೂ ಹೇಳುವುದಿದೆ.

	ಖನಿಜಗಳು ಸ್ಫುಟಗೊಳ್ಳುವಿಕೆ ಮಾತೃಶಿಲಾದ್ರವ ಆರುವ ಕಾಲಗತಿಯನ್ನು ಅವಲಂಬಿಸಿದೆ. ನಿಧಾನವಾಗಿ ಆರುತ್ತ ಹೋದಲ್ಲಿ ಅದು ಹೆಚ್ಚು ಕಾಲ ದ್ರವಸ್ಥಿತಿಯಲ್ಲಿದ್ದು ಖನಿಜಗಳ ಪರಮಾಣುಗಳು ಸುಲಭವಾಗಿ ಪ್ರವಹಿಸಿ ಪರಸ್ಪರ ಸಂಯೋಗಗೊಳ್ಳುತ್ತ ವಿವಿಧ ಪ್ರಕಾರದ ದಪ್ಪನೆಯ ಖನಿಜಗಳು ಮೈದೋರುತ್ತವೆ. ಈ ಕಾರ್ಯದಲ್ಲಿ ಮ್ಯಾಗ್ಮದಲ್ಲಿ ಹುದುಗಿರುವ ನೀರಿನ ಆವಿ ಮುಂತಾದ ಹಬೆಗಳು ಗುರುತರ ಪಾತ್ರ ವಹಿಸುತ್ತವೆ. ಇವು ಮುಖ್ಯವಾಗಿ ಮ್ಯಾಗ್ಮದ ದ್ರವಸ್ಥಿತಿಯನ್ನು ಕಾಪಾಡಿ ಕೊಂಡು ಬರಲು ಸಹಾಯಕ.

	ವಿನ್ಯಾಸದ ನಿರ್ಧಾರಕ್ಕೆ ಖನಿಜಗಳ ಆಕಾರವೂ ಮುಖ್ಯ ಅಂಶ. ಖನಿಜಕಣಗಳು ಪೂರ್ಣಾಕಾರವಾಗಿದ್ದಲ್ಲಿ ಅವನ್ನು ಯೂಹೀಡ್ರಲ್ ಎಂದೂ ಅವುಗಳ ಆಕಾರ ಅಪೂರ್ಣವಾಗಿದ್ದಲ್ಲಿ ಮಿತಾಕೃತಿ(ಸಬ್‍ಹೀಡ್ರಲ್) ಎಂದೂ ಯಾವ ಆಕಾರವೂ ಇಲ್ಲದಿದ್ದಲ್ಲಿ ನಿರಾಕೃತಿ(ಅನ್‍ಹೀಡ್ರಲ್) ಎಂದೂ ಕರೆಯುವುದಿದೆ. ಶಿಲೆಯಲ್ಲಿಯ ಬಹುತೇಕ ಖನಿಜಗಳು ಪೂರ್ಣಾಕಾರ ಹೊಂದಿದಲ್ಲಿ ಆ ಬಗೆಯ ವಿನ್ಯಾಸವನ್ನು ಸ್ವರೂಪವಿನ್ಯಾಸ (ಕ್ಯಾನೀಡಿಯೋಮಾರ್ಫಿಕ್) ಎಂದೂ ಮಿತಾಕಾರ ಹೊಂದಿದ್ದಲ್ಲಿ ಹೈಪೀಡಿಯೋಮಾರ್ಫಿಕ್ ವಿನ್ಯಾಸವೆಂದೂ ನಿರ್ವಿಕಾರವಾಗಿದ್ದಲ್ಲಿ ರೂಪರಹಿತ (ಅಲೋಟ್ರಯೋಮಾರ್ಫಿಕ್) ವಿನ್ಯಾಸವೆಂದೂ ಕರೆಯುತ್ತಾರೆ.

	ಶಿಲೆಯಲ್ಲಿರುವ ಖನಿಜಕಣಗಳ ಪರಸ್ಪರ ಸಂಬಂಧ ಅವುಗಳಿಗೂ ಗಾಜಿಗೂ ಇರುವ ಪರಸ್ಪರ ಹೊಂದಾಣಿಕೆ-ಈ ಅಂಶಗಳು ಶಿಲಾವಿನ್ಯಾಸದ ವಿವರಣೆಯಲ್ಲಿ ಬಲು ಮುಖ್ಯ. ಕಣಗಾತ್ರದಲ್ಲಿ ಹೆಚ್ಚಿನ ಏರುಪೇರುಗಳಿಲ್ಲದೆ ಪರಸ್ಪರ ಸರಿಸಮವಾಗಿದ್ದರೆ ಆ ಬಗೆಯ ವಿನ್ಯಾಸವನ್ನು ಸಮಕಣ (ಈಕ್ವಿಗ್ರ್ಯಾನುಲಾರ್) ವಿನ್ಯಾಸವೆಂದೂ ಹಾಗಿಲ್ಲದೆ ಪರಸ್ಪರ ನಿರ್ದಿಷ್ಟವ್ಯ ತ್ಯಾಸಗಳಿದ್ದಲ್ಲಿ ಅಸಮಕಣ (ಇನ್‍ಈಕ್ವಿಗ್ರ್ಯಾನುಲಾರ್) ವಿನ್ಯಾಸವೆಂದೂ ಕರೆಯುವುದಿದೆ. ಸಮಕಣ ವಿನ್ಯಾಸದ ಶಿಲೆಗಳು ಬಲು ಆಳದಲ್ಲಿ ಉಂಟಾಗುತ್ತವೆ. ಆ ವಲಯಗಳಲ್ಲಿ ಮ್ಯಾಗ್ಮದ ಆರುವಿಕೆ ಮಂದಗತಿಯಲ್ಲಿ ಸಾಗುತ್ತಿರುತ್ತದೆ. ಅಲ್ಲದೆ ಒತ್ತಡವೂ ಅಧಿಕ. ಗ್ರಾನೈಟ್ ಎಂಬ ಅಂತಸ್ಸರಣ ಶಿಲೆಯಲ್ಲಿ ಈ ಕಾರಣಗಳಿಗಾಗಿ ಸಮಕಣ ವಿನ್ಯಾಸ ಉತ್ತಮ ರೀತಿಯಲ್ಲಿ ಕಂಡುಬಂದಿದೆ. ಈ ಕಾರಣದಿಂದ ವಿನ್ಯಾಸಕ್ಕೆ ಗ್ರಾನಿಟಿಕ್ ವಿನ್ಯಾಸ ಎಂಬ ಹೆಸರೂ ಇದೆ.

	ಮ್ಯಾಗ್ಮ ಆರುವ ವೇಳೆ ತೀವ್ರಗತಿಯಲ್ಲಿ ತಲೆದೋರಿದ ಭೌತ ಬದಲಾವಣೆಗಳನ್ನು ಅಸಮಕಣವಿನ್ಯಾಸ ಸೂಚಿಸುತ್ತದೆ. ಈ ವರ್ಗಕ್ಕೆ ಉತ್ತಮ ಉದಾಹರಣೆ ಎಂದರೆ ಪಾರ್ಫಿಲಿಟಿಕ್ ವಿನ್ಯಾಸ. ಇಲ್ಲಿ ದೊಡ್ಡ ಖನಿಜ ಕಣಗಳು ಅಥವಾ ಹರಳುಗಳು ಅಲ್ಲೊಂದು ಇಲ್ಲೊಂದರಂತೆ ಸೂಕ್ಷ್ಮಕಣಗಳ ಮಧ್ಯೆ ಹುದುಗಿರುತ್ತವೆ. ದೊಡ್ಡ ಹರಳುಗಳಿಗೆ ಬೃಹತ್ ಸ್ಫಟಿಕಗಳು (ಫಿನೊಕ್ರಿಸ್ಟ್) ಎಂದು ಹೆಸರು. ಮ್ಯಾಗ್ಮ ಹೆಚ್ಚಿನ ಆಳದಲ್ಲಿ ಆರಲು ಪ್ರಾರಂಭವಾದಾಗ ಅಲ್ಲೊಂದು ಇಲ್ಲೊಂದರಂತೆ ಹರಳುಗಳು ಉದ್ಭವವಾಗುತ್ತವೆ. ಕ್ರಮೇಣ ಕಾರಣಾಂತರದಿಂದ ಇದನ್ನು ಒಳಗೊಂಡ ಮ್ಯಾಗ್ಮ ಮೇಲಿನ ಪದರಗಳಿಗೆ ನೂಕಲ್ಪಡಬಹುದು ಇಲ್ಲವೆ ಭೂಮಿಯ ಮೇಲೆ ಲಾವಾರಸದಂತೆ ಹರಿದು ಬೇಗನೆ ಆರಿ ಶಿಲೆಯಾಗಬಹುದು. ಹೀಗಾಗುವುದರಿಂದ ಮೊದಲು ಉಂಟಾದ ಖನಿಜಕಣಗಳ ಹೊರತು ಶಿಲೆಯ ಇತರ ಖನಿಜಾಂಶಗಳು ಚೆನ್ನಾಗಿ ರೂಪುಗೊಳ್ಳಲು ಸಾಧ್ಯವಾಗದೆ ಸೂಕ್ಷ್ಮಕಣಗಳಾಗಿಯೇ ಮಾರ್ಪಡುತ್ತವೆ.

	ಹಲವು ವೇಳೆ ಅಸಂಖ್ಯಾತ ಸೂಕ್ಷ್ಮ ಆದರೆ ಸ್ಪಷ್ಟ ಆಕೃತಿಯ ಖನಿಜಕಣಗಳು ದೊಡ್ಡ ಹರಳುಗಳಲ್ಲಿ ಅಡಕವಾಗಿ ಪಾಯ್‍ಕಿಲಿಟಿಕ್ ವಿನ್ಯಾಸ ಉಂಟುಮಾಡುತ್ತವೆ. ಇದು ಪಾರ್ಫಿರಿಟಿಕ್ ವಿನ್ಯಾಸಕ್ಕೆ ತದ್ವಿರುದ್ದ.

	ಕೆಲವು ಶಿಲೆಗಳಲ್ಲಿ ಎರಡು ಖನಿಜಗಳು ಜಡೆಯಂತೆ ಹೆಣೆದುಕೊಂಡು ವಿಶೇಷ ರೀತಿಯ ವಿನ್ಯಾಸ ಉಂಟಾಗುತ್ತದೆ. ಇದು ಪೆಗ್ಮಟೈಟ್ ಎಂಬ ಶಿಲೆಯಲ್ಲಿ ಬಲು ಚೆನ್ನಾಗಿ ಕಾಣಬರುವುದರಿಂದ ಇದನ್ನು ಪೆಗ್ಮಟಿಟಿಕ್ ವಿನ್ಯಾಸ ಎಂದೂ ಕರೆಯುತ್ತಾರೆ. ಕ್ವಾಟ್ರ್ಸ್ ಮತ್ತು ಫೆಲ್‍ಸ್ಪಾರ್ ಎಂಬ ಎರಡು ಖನಿಜಗಳ ಹೆಣಿಗೆಯನ್ನು ಸಾಮಾನ್ಯವಾಗಿ ಪೆಗ್ಮಟೈಟಿನಲ್ಲಿ ಕಾಣಬಹುದು. ಎರಡು ಖನಿಜಗಳೂ ಏಕಕಾಲದಲ್ಲಿ ಮಾತೃಶಿಲಾದ್ರವ ದಿಂದ ರೂಪುಗೊಳ್ಳಲು ಪ್ರಾರಂಭಿಸುವುದರಿಂದ ಈ ಬಗೆಯ ವಿನ್ಯಾಸ ಉಂಟಾಗುತ್ತದೆ. ಇದಕ್ಕೆ ಯುಟೆಕ್‍ಟಿಕ್ಸ್ ಎಂಬ ಹೆಸರೂ ಇದೆ.

	ಹಲವು ಬಹಿಸ್ಸರಣಶಿಲೆಗಳಲ್ಲಿ ಶಿಲಾರಸ ಹರಿದ ದಿಕ್ಕಿಗೆ ಅನುಗುಣ ವಾಗಿ ಕೆಲವು ಖನಿಜಕಣಗಳು, ಅನಿಲರಂಧ್ರಗಳು ಪರಸ್ಪರ ಸಮಾಂತರ ಜಾಡುಗಳಲ್ಲಿ ಶೇಖರಗೊಂಡು ನಿರ್ದಿಷ್ಟ ರೀತಿಯ ವಿನ್ಯಾಸವನ್ನು ಉಂಟುಮಾಡುತ್ತವೆ. ಇದಕ್ಕೆ ಪ್ರವಾಹ ವಿನ್ಯಾಸ (ಫ್ಲೋಟೆಕ್ಸ್ಚರ್) ಎಂದು ಹೆಸರು.	

	ಶಿಲಾಕ್ಷಯ: ಶಿಲೆಗಳು ತಮ್ಮ ನಿಜಸ್ವರೂಪ ಕಳೆದುಕೊಂಡು ಶಿಥಿಲಗೊಂಡು, ಬೀಳುಬಿದ್ದು, ಕೊನೆಗೆ ಮಣ್ಣಾಗಿ ಹೋಗುವ ಪ್ರಕೃತಿ ವ್ಯಾಪಾರ (ರಾಕ್ ವೆದರಿಂಗ್; ಕ್ಲಾಸ್ಟೇಷನ್). ಶಿಲಾಕ್ಷಯಕ್ಕೆ ಗಾಳಿ, ಮಳೆ, ನೀರುಗಳ ಹಾವಳಿ ಕಾರಣ. ಶಿಲೆ ಕ್ಷಯಿಸುತ್ತಿರುವುದನ್ನು ಸಾಮಾನ್ಯವಾಗಿ ಎಲ್ಲೆಡೆಯೂ ಕಾಣಬಹುದು. ಈ ಕ್ರಿಯೆ ಬಲು ನಿಧಾನವಾಗಿ ಸಾಗುವುದರಿಂದ ಉಂಟಾಗುವ ವ್ಯತ್ಯಾಸ ಥಟ್ಟನೆ ಗೋಚರವಾಗುವುದಿಲ್ಲ. ಪ್ರಾಕೃತಿಕ ಬಲಗಳಾದ ಗಾಳಿ, ಮಳೆ, ನೀರುಗಳ ಹಾವಳಿಗೆ ಸಿಕ್ಕಿ ಕ್ಷಯಿಸದ ವಸ್ತುವೇ ಪ್ರಪಂಚದಲ್ಲಿಲ್ಲ. ಕಾಲ ಕಳೆದಂತೆಲ್ಲ ಶಿಲಾಕ್ಷಯದ ಪರಿಣಾಮವಾಗಿ ಭೂಮಿಯ ಹೊರಮೈಯಲ್ಲಿ ಆಗುವ ವ್ಯತ್ಯಾಸ ಅಪಾರ. ಇದರ ಸಲುವಾಗಿ ಕಲ್ಲಿನ ಮೇಲೆ ವಿರೂಪಗೊಂಡ ಹೊರ ಹೊದಿಕೆ ಏರ್ಪಡುತ್ತದೆ. ಇದರ ಮಂದ ನೂರಾರು ಸೆಂಮೀ ಇರಬಹುದು.

	ಶಿಲಾಕ್ಷಯದಲ್ಲಿ ಎರಡು ಪ್ರಮುಖ ವಿಧಗಳಿವೆ. ಭೌತಿಕವಾದದ್ದು ಒಂದು, ರಾಸಾಯನಿಕವಾದದ್ದು ಇನ್ನೊಂದು. ಭೌತಿಕಕ್ಷಯದಲ್ಲಿ ಕಲ್ಲು ಬಿರಿದು ಸೀಳಿಹೋಗುತ್ತದೆ. ಪಾಳಿಗಳು ಮತ್ತೆ ಮತ್ತೆ ಚೂರುಗಳಾಗುತ್ತವೆ. ಪ್ರತಿಯೊಂದು ಚೂರೂ ಮತ್ತೆ ಛಿದ್ರವಾಗುತ್ತದೆ. ಕೊನೆಗೆ ಕಲ್ಲು ಧ್ವಂಸವಾಗುತ್ತದೆ. ಇದು ಒಂದು ಬಗೆಯ ಕ್ಷಯ. ಇದರಲ್ಲಿ ಯಾವ ರಾಸಾಯನಿಕ ಕ್ರಿಯೆಯೂ ಇಲ್ಲ. ಎರಡನೆಯ ಬಗೆಯಲ್ಲಿ ರಾಸಾಯನಿಕ ಕ್ರಿಯೆಯ ಪಾತ್ರ ಹೆಚ್ಚು. ಕಬ್ಬಿಣಯುಕ್ತ ಯಾವುದೇ ಪದಾರ್ಥವನ್ನಾಗಲಿ ಹೊರಗಿಟ್ಟಿದ್ದರೆ ಅದು ತುಕ್ಕು ಹಿಡಿಯುವುದು ರಾಸಾಯನಿಕ ಕ್ರಿಯೆ. ಶಿಲೆಯಲ್ಲಿ ಕಬ್ಬಿಣಯುಕ್ತವಾದ ಕೆಲವು ಖನಿಜಗಳಿರುತ್ತವೆ. ಇವು ತುಕ್ಕು ಹಿಡಿದು ತಮ್ಮ ಮೊದಲಿನ ಆಕಾರವನ್ನು ಕಳೆದುಕೊಳ್ಳುತ್ತವೆ. ಪಳಪಳನೆ ಹೊಳೆಯುತ್ತಿರುವ ಖನಿಜಗಳು ಕೆಲಕಾಲಾನಂತರ ಕಳೆಗುಂದಿ ಮಸಕು ಮಸಕಾಗಿ. ಕಂದು ಬಣ್ಣಕ್ಕೆ ತಿರುಗುತ್ತವೆ. ಕಾಲ ಕಳೆದಂತೆಲ್ಲ ಮತ್ತಷ್ಟು ಕಳೆಗುಂದಿ ಗಡಸು ಕಲ್ಲು ಹಿಟ್ಟಾಗಿ, ಕೊನೆಗೆ ಮಣ್ಣಾಗುತ್ತದೆ. ಈ ಎರಡು ಬಗೆಯ ಕ್ರಿಯೆಗಳಿಂದ ಶಿಲಾ ಸಮುದಾಯ ಪೂರ್ಣವಾಗಿ ಕ್ಷಯಿಸಿಹೋಗುತ್ತದೆ.

	ಶಿಲಾಕ್ಷಯದಲ್ಲಿ ಶಿಲೆ ಶಿಥಿಲವಾಗಿ ಬೀಳುಬಿದ್ದುಬಿಡುವುದು ಮಾತ್ರ ಅಲ್ಲದೆ ಬೀಳುಬಿದ್ದ ವಸ್ತು ಕೂಡ ಗಾಳಿ ಮತ್ತು ಹರಿಯುವ ನೀರಿನ ಹಾವಳಿಗೆ ಒಳಪಟ್ಟು ಬಲುದೂರ ಸಾಗಿಹೋಗುತ್ತದೆ. ಬೀಳುಬಿದ್ದ ಕವಚ ಈ ರೀತಿ ಕೊಚ್ಚಿ ಹೋಗುವುದರಿಂದ ಮತ್ತೆ ಮತ್ತೆ ಹೊಸ ಭಾಗ ಕಾಣಿಸಿಕೊಂಡು ಶಿಲೆ ಇನ್ನೂ ಬೇಗ ಕ್ಷಯಿಸಲು ಅನುಕೂಲಿಸುತ್ತದೆ. ಶಿಲಾಕ್ಷಯ ಮತ್ತು ಕ್ಷಯಿಸಿಹೋದ ವಸ್ತುವಿನ ಸಾಗಾಣಿಕೆಗಳೆರಡೂ ಒಂದರೊಡನೊಂದು ಜೊತೆಗೂಡುವುದರಿಂದ ಬೆಟ್ಟವಾಗಿ ಎದ್ದುನಿಂತಿರುವ ಬೃಹದಾಕಾರದ ಕಲ್ಲು ಬಂಡೆಯೂ ಕಾಲಾನುಕ್ರಮದಲ್ಲಿ ಶಿಥಿಲವಾಗಿ ಬೀಳುಬಿಟ್ಟು ಬಿದ್ದ ವಸ್ತುವೆಲ್ಲವೂ ಬಲುದೂರ ಸಾಗಿಹೋಗಿ, ಬೆಟ್ಟ ಕಣಿವೆಗಳಿಂದ ಕಂಗೊಳಿಸುತ್ತಿದ್ದ ನೆಲ ಬೋಳುಬಯಲಾಗಿ ಮಾರ್ಪಡುತ್ತದೆ.

	ಭೌತಿಕಕ್ಷಯ: ಕಲ್ಲು ಬಂಡೆಯನ್ನು ಸೀಳಿ ಅದರಿಂದ ಚಪ್ಪಡಿಗಳನ್ನು ಎಬ್ಬಿಸಲು ಕಲ್ಲಿನ ಮೇಲೆ ಬೆಂಕಿ ಹರವಿ ಅದು ಪದರ ಪದರವಾಗಿ ಬಿಟ್ಟುಕೊಳ್ಳುವಂತೆ ಮಾಡುವುದಿದೆ. ಒಡೆಯಲು ಆಗದ ಕಲ್ಲುಗುಂಡನ್ನು ಸೀಳಬೇಕಾದರೆ ಅದಕ್ಕೆ ಮೊದಲು ಬೆಂಕಿ ತಗಲಿಸುತ್ತಾರೆ. ಕಾದ ಕಲ್ಲುಗುಂಡಿನ ಮೇಲೆ ತಣ್ಣೀರೆರಚಿದರೆ ಕಲ್ಲು ಸೀಳುಬಿಡುತ್ತದೆ. ಬಿಸಿಲಿನ ತಾಪ ತೀವ್ರವಿರುವ ಉಷ್ಣಪ್ರದೇಶಗಳಲ್ಲಿ ಬಿಸಿಲಿನ ಕಾವಿನಿಂದ ಬಂಡೆಗಳು ಕಾದು ಉಬ್ಬುತ್ತವೆ. ರಾತ್ರಿಯ ತಂಪಿನಲ್ಲಿ ಉಬ್ಬಿದ್ದ ಕಲ್ಲು ಕುಗ್ಗುತ್ತದೆ. ಹೀಗೆ ನಿರಂತರವಾಗಿ ಬಿಡುವಿಲ್ಲದಂತೆ ಕುಗ್ಗುವಿಕೆ, ಹಿಗ್ಗುವಿಕೆಗಳಿಗೆ ಒಳಗಾದ ಕಲ್ಲು ತನ್ನ ಗಡಸುತನ ಕಳೆದುಕೊಂಡು ಬೀಳುಬಿಡುತ್ತದೆ. ಬಂಡೆಯ ಮೇಲೆ ಪದರ ಪದರವಾಗಿ ಚಕ್ಕೆಗಳು ಏಳುತ್ತವೆ. ಗಡಸು ಕಲ್ಲುಗುಂಡು ಕೂಡ ಪದರ ಪದರವಾಗಿ ಬಿಟ್ಟುಕೊಳ್ಳುತ್ತದೆ. ಬಂಡೆಗಳು ಒಡೆದು, ಗುಂಡುಕಲ್ಲಿನ ರಾಶಿಯಾಗಿ ಬೀಳುತ್ತವೆ. ಕಲ್ಲು ಗುಂಡುಗಳೂ ಒಡೆದು ಕಲ್ಲುಜಲ್ಲಿ ಆಗುತ್ತದೆ. ಜಲ್ಲಿ ಛಿದ್ರವಾಗುತ್ತ ಕೊನೆಗೆ ಮರಳಾಗುತ್ತದೆ.

	ಶೀತವಲಯಗಳಲ್ಲಿ ಹಿಮದ ಪಾತ್ರ ಮುಖ್ಯ. ಕಲ್ಲಿನ ಮಧ್ಯೆ ಇರುವ ಸಂದುಗಳಲ್ಲಿ ತುಂಬಿರುವ ನೀರು ಅತಿಶೀತದ ದೆಸೆಯಿಂದ ಗಡ್ಡೆಕಟ್ಟುತ್ತದೆ. ಗಡ್ಡೆ ಕಟ್ಟುವಾಗ ಅದು ಒಂದಕ್ಕೆ ಹತ್ತರಷ್ಟು ಹಿಗ್ಗುತ್ತದೆ. ಇದರ ಪರಿಣಾಮವಾಗಿ ಎಂಥ ಗಡಸು ಕಲ್ಲಾದರೂ ಬಲುಬೇಗ ಛಿದ್ರಛಿದ್ರವಾಗಿ ಒಡೆದು ಹೋಗುತ್ತದೆ. ಹಿಮಾಚ್ಛಾದಿತಪ್ರದೇಶಗಳಲ್ಲಿ ಕಡಿದಾದ ಪರ್ವತದ ಭಾಗಗಳು ಈ ರೀತಿ ಬಲು ಬೇಗ ಛಿದ್ರವಾಗಿ, ಛಿದ್ರಗೊಂಡ ವಸ್ತುವೆಲ್ಲ ಕೆಳಗೆ ಜರುಗಿ, ಪರ್ವತದ ತಪ್ಪಲಿನಲ್ಲಿ ರಾಶಿ ಬಿದ್ದಿರುವುದು ಸಾಮಾನ್ಯ ದೃಶ್ಯ.

	ಸಮುದ್ರತೀರ ಪ್ರದೇಶದಲ್ಲಿ ಅಲೆಗಳ ಹಾವಳಿ ಹೆಚ್ಚು. ತೀವ್ರತೆರನ ಅಲೆಗಳು ಒಂದರ ಮೇಲೊಂದು ಬಂದು ದಡದಲ್ಲಿರುವ ಕಲ್ಲಿನ ಮೇಲೆ ಅಪ್ಪಳಿಸುತ್ತವೆ. ಅಲೆಗಳ ಈ ಹೊಡೆತಕ್ಕೆ ಕಲ್ಲು ಈಡಾಗಿ ಒಡೆದು ನೊರಜುಕಲ್ಲು, ಮರಳು, ರಾಶಿರಾಶಿಯಾಗಿ ಕಡಲಂಚಿನಲ್ಲಿ ಒಟ್ಟುಗೂಡಿರುತ್ತದೆ.

	ಮರದಬೇರುಗಳೂ ಕಲ್ಲನ್ನು ಸೀಳಿ ತುಂಡರಿಸುತ್ತವೆ. ಹಳೆಯ ಮನೆ, ದೇವಸ್ಥಾನಗಳಲ್ಲಿ ಗಿಡಗಂಟೆಗಳು ಬೆಳೆದುಕೊಂಡು ಅದರ ಬೇರುಗಳು ಹಬ್ಬಿ ಮನೆಯ ಗೋಡೆಗಳನ್ನೂ ಕೆಳಗಡೆ ಹಾಸಿರುವ ಕಲ್ಲನ್ನೂ ಭೇದಿಸಿರುವುದನ್ನು ಕಾಣಬಹುದು. ಶಿಲೆ ಬೀಳಾಗುವುದಕ್ಕೆ ಸಸ್ಯಗಳೂ ಕಾರಣ. ಕಲ್ಲು ಸೀಳುಬಿಟ್ಟಮೇಲೆ ಆ ಸಂದುಗಳಲ್ಲಿ ನೀರಿನ ಪ್ರವೇಶ ಸುಲಭಸಾಧ್ಯ; ಹುಳುಹುಪ್ಪಟೆಗಳೂ ಸೇರುತ್ತವೆ. ಗೆದ್ದಲು ಹತ್ತುತ್ತದೆ. ಈ ಎಲ್ಲ ಕಾರಣಗಳಿಂದ ಶಿಲಾಕ್ಷಯ ಕಾರ್ಯ ತ್ವರಿತಗೊಳ್ಳುತ್ತದೆ.

	ರಾಸಾಯನಿಕ ಕ್ಷಯ: ಕಲ್ಲಿನಲ್ಲಿರುವ ಯಾವುದೇ ಖನಿಜವಾಗಲಿ ಬಲುಕಾಲ ತನ್ನ ಹೊಸತನವನ್ನು ಉಳಿಸಿಕೊಳ್ಳಲಾರದು. ಹೊಸದಾಗಿ ಕಟ್ಟಿದ ಕಲ್ಲು ಕಟ್ಟಡಗಳು, ಕಡೆದು ನಿಲ್ಲಿಸಿದ ಪ್ರತಿಮೆಗಳು, ಕೆಲವೇ ವರ್ಷಗಳಲ್ಲಿ ತಮ್ಮ ಸ್ವಚ್ಚತೆಯನ್ನು ಕಳೆದುಕೊಂಡು ಬಣ್ಣಗೆಟ್ಟು ಕಾಂತಿಗುಂದುವುದು ಸಾಮಾನ್ಯ. ಕಬ್ಬಿಣದ ಅಂಶ ಇರುವ ಖನಿಜಗಳು ಬಲು ಬೇಗ ತುಕ್ಕು ಹಿಡಿಯುತ್ತವೆ. ಕಲ್ಲಿನ ಬಣ್ಣ ಕಂದಾಗುವುದಕ್ಕೂ ಕೊನೆಗೆ ಅದು ಶಿಥಿಲವಾಗುವುದಕ್ಕೂ ಇದೇ ಕಾರಣ. ಇನ್ನೂ ಕೆಲವು ಖನಿಜಗಳು ನೀರಿನಲ್ಲಿ ವಿಲೀನವಾಗುತ್ತವೆ. ಸುಣ್ಣ ಸಂಬಂಧದ ಖನಿಜಗಳು ಈ ರೀತಿ ವಿಲೀನವಾಗುವುದು ಸಾಮಾನ್ಯ. ಇಂಥ ಖನಿಜಗಳನ್ನೊಳಗೊಂಡ ಕಲ್ಲು ಬಲುಬೇಗ ಕಜ್ಜಿಹತ್ತಿದಂತಾಗಿ ರಂಧ್ರಮಯವಾಗುತ್ತದೆ. ಈ ಕ್ರಿಯೆ ಮುಂದುವರಿದಂತೆಲ್ಲ ರಂಧ್ರಗಳು ಒಟ್ಟುಗೂಡಿ ಗುಹೆಗಳಾಗುವುದು ಉಂಟು. ಸುಣ್ಣ ಕಲ್ಲಿರುವ ಪ್ರಾಂತ್ಯದಲ್ಲೆಲ್ಲ ಈ ರೀತಿಯ ಗುಹೆಗಳು ಬಲು ದೂರದವರೆಗೆ ಹಬ್ಬಿರುವುದನ್ನು ಕಾಣಬಹುದು.

	ಕಪ್ಪುಬಣ್ಣದ ಕಲ್ಲುಗಳಲ್ಲಿ ಕಬ್ಬಿಣ ಸಂಬಂಧವಾದ ಖನಿಜಗಳು ವಿಶೇಷವಾಗಿರುವುದರಿಂದ ಅವು ಬಹುಬೇಗ ಕಳೆಗುಂದಿ ಹಳದಿಬಣ್ಣ ತಾಳುತ್ತವೆ. ಈ ಕಾರಣಕ್ಕಾಗಿ ಇವನ್ನು ಕಟ್ಟಡ ನಿರ್ಮಾಣಕ್ಕೆ ಬಳಸುವುದಿಲ್ಲ. ಬಲುಕಾಲ ಬಾಳಬೇಕೆಂದಿರುವ ಕಟ್ಟಡಗಳು, ದೇವಸ್ಥಾನ ಗಳು, ಸ್ಮಾರಕ ಸ್ತಂಭಗಳು ಮುಂತಾದವನ್ನು ಕಟ್ಟುವುದಕ್ಕೆ ಅಷ್ಟು ಸುಲಭವಾಗಿ ಕೆಡದಂಥ ನಯಕಲ್ಲನ್ನು ಬಳಸುತ್ತಿದ್ದರು. ಎಂಥ ಬೃಹದ್ಗಾತ್ರದ ಕಲ್ಲೇ ಆಗಲಿ ಗಾಳಿ, ಮಳೆ ಹೊಡೆತಕ್ಕೆ ಸಿಕ್ಕಿದರೆ ಅದು ನಶಿಸಿಯೇ ಹೋಗುವುದು. ಸಮಾಧಿ ಪ್ರದೇಶದ ಕಲ್ಲುಗಳು, ಮಹಾಸತಿ ಕಲ್ಲುಗಳು, ವೀರ ಕಲ್ಲುಗಳು, ಕಲ್ಲಿನ ಶಾಸನಗಳು ಇವೆಲ್ಲ ಶಿಲಾಕ್ಷಯದ ಪರಿಣಾಮಕ್ಕೆ ಈಡಾಗಿರುವಂಥವೇ.

	ಪ್ರಪಂಚದ ಎಲ್ಲ ನದಿಗಳು ಒಟ್ಟು ವರ್ಷಂಪ್ರತಿ ಸು. 8000 ಮಿಲಿಯನ್ ಟನ್ನುಗಳಷ್ಟು ಕಲ್ಲು ಮಣ್ಣನ್ನು ಸಾಗರಕ್ಕೆ ಕೊಂಡೊಯ್ಯುತ್ತಿವೆ ಯೆಂಬುದು ಒಂದು ಅಂದಾಜು. ಲಕ್ಷಾಂತರ ವರ್ಷಗಳಲ್ಲಿ ಎತ್ತರವಾಗಿ ಎದ್ದು ನಿಂತಿರುವ ಭೂಭಾಗವೆಲ್ಲ ನೆಲಸಮಾವಾಗಲೇ ಬೇಕಾಗುತ್ತದೆ. ಈ ಕ್ಷಯಕಾರ್ಯ ಭೂಮಿಯ ಎಲ್ಲ ಕಡೆಯೂ ಒಂದೇ ವೇಗದಲ್ಲಿ ನಡೆಯುತ್ತಿಲ್ಲ. ಪರ್ವತ ಪ್ರದೇಶಗಳಲ್ಲಿ ವೇಗ ಹೆಚ್ಚು. ಉದಾಹರಣೆಗೆ 400 ವರ್ಷಗಳಲ್ಲಿ ಸು. 30 ಸೆಂಮೀನಷ್ಟು ಭೂಭಾಗ ಕ್ಷಯಿಸಿ ಹೋಗಬಹುದು. ಅದೇ ಬಯಲು ಪ್ರದೇಶದಲ್ಲಿ ಇಷ್ಟೇ ಭಾಗ ಸವೆಯ ಬೇಕಾದರೆ 50,000 ವರ್ಷಗಳಾದರೂ ಬೇಕಾಗಬಹುದು. ನದಿಗಳು ನಿರಂತರವಾಗಿ ಹೊತ್ತು ತರುತ್ತಿರುವ ಹೂಳು ಮಣ್ಣಿನಿಂದ ಜಲಾಶಯಗಳು ಕ್ರಮೇಣ ಮುಚ್ಚಿಹೋಗುತ್ತವೆ ಎಂಬ ಅಭಿಪ್ರಾಯವೂ ಇದೆ. ಶಿಲಾಕ್ಷಯದ ಫಲ ಇದು.

	ಶಿಲಾಕ್ಷಯಕ್ಕೆ ಈಡಾದ ಮತ್ತು ಅದರಿಂದ ಉಂಟಾದ ವಸ್ತುವೆಲ್ಲವೂ ಮೊದಲಿದ್ದ ಸ್ಥಳದಲ್ಲಿಯೇ ಇರುವುದಿಲ್ಲ. ಹರಿಯುವ ನೀರು ಇವನ್ನು ಕೊಚ್ಚಿಕೊಂಡು ಹೋಗಿ ನದಿಗಳ ಮೂಲಕ ಬಲು ದೂರಸಾಗಿಸುತ್ತದೆ. ಪ್ರವಾಹ ಕಾಲದಲ್ಲಿ ನೀರಿನೊಂದಿಗೆ ಅಗಾಧ ಮೊತ್ತದಲ್ಲಿ ಕಲ್ಲು ಮಣ್ಣು ಸಾಗಿಹೋಗುತ್ತದೆ. ಈ ವಸ್ತುವೆಲ್ಲ ಕೊನೆಗೆ ಸಮುದ್ರ ಸೇರಿ ಅದರ ತಳಭಾಗದಲ್ಲಿ ತಂಗುತ್ತದೆ. ಕೆಳಗೆ ತಂಗಿದ ಮಣ್ಣಿನ ಮೇಲೆ ಅನಂತರ ಬಂದ ವಸ್ತು ಬಂದು ಶೇಖರವಾಗುತ್ತದೆ. ಈ ಕ್ರಿಯೆ ಮುಂದುವರಿದಂತೆಲ್ಲ ಕೆಳಗಿನ ಪದರಗಳು ಒತ್ತಡಕ್ಕೆ ಸಿಕ್ಕಿ ಗಡಸಾಗುತ್ತ ಪುನಃ ಗಟ್ಟೆಕಲ್ಲಾಗಿ ಮಾರ್ಪಡುತ್ತವೆ. ಕಾಲಾನುಕ್ರಮದಲ್ಲಿ ನೀರಿನಲ್ಲಿ ಶೇಖರವಾಗಿದ್ದ ಶಿಲಾಪದರಗಳೂ ಭೂಮಿಯ ಅಂತಶ್ಶಕ್ತಿಗಳ ಫಲವಾಗಿ ಮಡಿಕೆ ಬಿದ್ದು, ನೀರಿನಿಂದ ಮೇಲೆದ್ದು ಪರ್ವತಪಂಕ್ತಿಗಳಾಗಿ ನಿಲ್ಲುತ್ತವೆ. ಎದ್ದು ನಿಂತ ಕಲ್ಲು ಮತ್ತೆ ಕ್ಷಯಿಸುತ್ತದೆ, ಬೀಳುಬಿಡುತ್ತದೆ. ಬೀಳುಬಿದ್ದ ವಸ್ತುವೆಲ್ಲ ದೂರ ದೂರ ಸಾಗಿಹೋಗುತ್ತದೆ. ಮತ್ತೆ ಹೊಸ ಕಲ್ಲಿನ ಸೃಷ್ಟಿಯಾಗುತ್ತದೆ. ಈ ಪ್ರಕೃತಿ ಚಕ್ರ ಸಂತತವಾಗಿ ಮುಂದುವರಿಯುತ್ತಿರುತ್ತದೆ.

	ಶಿಲಾಕಾಂಡಗಳು: ಹಲವು ಸಹಸ್ರ ವರ್ಷಗಳ ಮೂಲಕ ಸಾಗಿಬಂದಿರುವ ಭೂಚರಿತ್ರೆಯ ವೃತ್ತಾಂತವನ್ನು ತಿಳಿಸುವ, ಸಂಚಯನ ಗೊಂಡಿರುವ ಸ್ತರಗಳಲ್ಲಿ ಶಿಲೆಗಳಾಗಿ ಕಂಡುಬರುವ, ಸಸ್ಯಕಾಂಡಗಳು (ಫಾಸಿಲ್ ವುಡ್ಸ್). ಇವಕ್ಕೆ ಶಿಲಾವೃಕ್ಷಗಳು ಎಂದೂ ಹೆಸರಿದೆ. ಸಸ್ಯದ ಇತರ ಭಾಗಗಳಿಗಿಂತಲೂ ಕಾಂಡಗಳು ಭೌತ ಹಾಗೂ ರಾಸಾಯನಿಕ ಸವೆತವನ್ನು ನಿರೋಧಿಸುವುದರಿಂದ ಇವು ಶಿಲಾಛಿದ್ರಗಳೊಂದಿಗೆ ವಿಶೇಷವಾಗಿ ಸಂಚಯನಗೊಳ್ಳುತ್ತವೆ. ಇವು ರಾಸಾಯನಿಕ ಕ್ರಿಯೆಗಳಿಗೆ ಒಳಗಾಗುವುದ ರಿಂದ ಶಿಲೆಗಳಾಗಿ ಪರಿವರ್ತನೆಯಾಗುತ್ತವೆ. ಕಾಂಡಗಳು ಶಿಲೆಗಳಾಗಲು ಅನೇಕ ರಾಸಾಯನಿಕ ಪದಾರ್ಥಗಳು ಕಾರಣ. ಅವುಗಳ ಪೈಕಿ ಸಿಲಿಕ, ಕಬ್ಬಿಣದ ಆಕ್ಸೈಡ್ ಮತ್ತು ಕ್ಯಾಲ್ಸಿಯಮ್ ಕಾರ್ಬೊನೇಟುಗಳು ಬಲು ಮುಖ್ಯ. ಈ ಪರಿವರ್ತನೆಯಲ್ಲಿ ಕಾಂಡಗಳ ಒಳರಚನೆ ವಿಶೇಷವಾಗಿ ಮಾರ್ಪಾಡುಹೊಂದದೆ ಹಾಗೆಯೇ ಉಳಿದುಕೊಳ್ಳುತ್ತದೆ. ಕೆಲವು ಶಿಲಾಕಾಂಡಗಳಲ್ಲಿ ವಾರ್ಷಿಕ ವಲಯಗಳು (ಆನ್ಯುಲಾರ್ ರಿಂಗ್ಸ್) ಕಂಡುಬಂದಿವೆ. ಶಿಲಾಕಾಂಡಗಳ ಪರಿಶೋಧನೆ ಪ್ರಾಗ್ ಸಸ್ಯವಿಜ್ಞಾನದ ಒಂದು ಮುಖ್ಯಭಾಗವೂ ಆಗಿದೆ.

	ಶಿಲಾಕಾಂಡಗಳ ಉದ್ದ ಕಿರುರೆಂಬೆಗಳ ಉದ್ದದಿಂದ ಸು. 30ಮೀ ಉದ್ದದವರೆಗೂ ಸುತ್ತಳತೆ ಹಲವಾರು ಮೀಟರುಗಳವರೆಗೂ ಇರುತ್ತದೆ. ಶಿಲಾವೃಕ್ಷಗಳನ್ನು ಒಳಗೊಂಡ ಸ್ತರಗಳ ಸಹಾಯದಿಂದ ಪ್ರಾಚೀನಕಾಲದ ಭೂಜಲವಿಂಗಡನೆ, ಹವಾಗುಣ, ವಾತಾವರಣ ಮುಂತಾದ ವಿಷಯಗಳನ್ನು ತಿಳಿಯಬಹುದು.

	ಶಿಲಾಕಾಂಡಗಳು ಭೂಇತಿಹಾಸದ ಸೈಲೂರಿಯನ್ ಕಾಲದಿಂದ ವರ್ತಮಾನ ಕಾಲದ ತನಕದ ಸ್ತರಗಳಲ್ಲಿ ದೊರಕಿವೆ. ಭಾರತದಲ್ಲಿ ದೊಡ್ಡ ಗಾತ್ರದ ಸಸ್ಯಕಾಂಡಗಳು ಪಶ್ಚಿಮ ಬಂಗಾಲದ ರಾಣಿಗಂಜ್‍ನ ಗೊಂಡ್ವಾನ ಸ್ತರಗಳು; ತಿರುಚ್ಚಿರಪಳ್ಳಿಯ ಸಾತ್ತನೂರು ಮತ್ತು ಮಧ್ಯಪ್ರದೇಶದ ಬಾಗ್ ಬಳಿಯ ಕ್ರಿಟೇಷನ್ ಸ್ತರಗಳು; ಪುದುಚ್ಚೇರಿಯ ತಿರುವಕ್ಕಾರೈ ಬಳಿಯ ಮಯೋಸೀನ್ ಸ್ತರಗಳು ಇಲ್ಲೆಲ್ಲ ಕಂಡುಬಂದಿವೆ.	                
    
      (ಕೆ.ವಿ.ಎಸ್.; ಎಮ್.ಎಸ್.ಎಸ್.; ಎಮ್.ವಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ